ಅಂಗಾಂಗ ಸಾಗಿಸಲು 22 ಬಾರಿ ಗ್ರೀನ್ ಕಾರಿಡಾರ್

green
Published on

ಬೆಂಗಳೂರು: ರಾಜಧಾನಿಯಲ್ಲಿ 2023ನೇ ಸಾಲಿನಲ್ಲಿ ರೋಗಿಗಳಿಗೆ ಅಂಗಾಂಗ ಕಸಿ ಮಾಡಲು ಕಡಿಮೆ ಅವಧಿಯಲ್ಲಿ ಹೃದಯ, ಲಿವರ್ ಸಾಗಿಸಲು 22 ಬಾರಿ ಸಂಚಾರ ಪೊಲೀಸರು ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಿದ್ದರು.

ಈ ಕುರಿತು ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್, ದೇಶದ ಐದು ಪ್ರಮುಖ ಮಹಾನಗರಗಳಲ್ಲಿ ಬೆಂಗಳೂರು ನಗರ ಸಹ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಒಳಗೊಂಡಿದೆ. ಸಾರ್ವಜನಿಕ ಸುಗಮ ಸಂಚಾರ ಜತೆಗೆ ಹೊರದೇಶ ಮತ್ತು ಹೊರರಾಜ್ಯಗಳಿಂದ ನಗರಕ್ಕೆ ತುರ್ತು ಚಿಕಿತ್ಸೆಗಾಗಿ ರೋಗಿಗಳು ಬರುತ್ತಿದ್ದಾರೆ. ಜೀವನ್ಮರಣದ ಸಂದರ್ಭದಲ್ಲೂ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಂಗಾಂಗ ಸಾಗಿಸಲು ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿದೆ. ಜಂಕ್ಷನ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಪೊಲೀಸ್ ಅಧಿಕಾರಿ, ಸಿಬ್ಬಂದಿ ಪ್ರತಿ ದಿನ 500ಕ್ಕೂ ಹೆಚ್ಚು ಆಂಬುಲೆನ್ಸ್‌ಗಳಿಗೆ ಆದ್ಯತೆ ಮೇರೆಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದರು.

ಆಂಬುಲೆನ್ಸ್ ಚಾಲಕರು ತುರ್ತು ಸಂದರ್ಭಕ್ಕಾಗಿ ಎಲ್ಲಿಂದ ಎಲ್ಲಿಗೆ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ಪೊಲೀಸ್ ಕಂಟ್ರೋಲ್ ರೂಮ್ 112ಕ್ಕೆ ಕರೆ ಮಾಡಿ ತಿಳಿಸುತ್ತಿದ್ದಾರೆ. ಅಂತಹ ಆಂಬುಲೆನ್ಸ್‌ಗಳಿಗೆ ಸಂಚಾರ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಪ್ರತಿ ತಿಂಗಳು ಅಂದಾಜು 3ರಿಂದ ಮೂರೂವರೆ ಸಾವಿರ ಆಂಬುಲೆನ್ಸ್‌ಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಇದಲ್ಲದೆ, ಆಂಬುಲೆನ್ಸ್ ರಸ್ತೆಯಲ್ಲಿ ಸಂಚರಿಸುವಾಗ ಸಾರ್ವಜನಿಕರು ಯಾವ ರೀತಿಯಲ್ಲಿ ಸಹಕರಿಸಬೇಕು ಎಂಬುದರ ಬಗ್ಗೆ ಅರಿವು ಮೂಡಿಸುವ ವಿಡಿಯೋ ಸಿದ್ಧಪಡಿಸಿದ್ದು, ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಹೊಸ ಆ್ಯಪ್ ಅಭಿವೃದ್ಧಿ

ಆಂಬುಲೆನ್ಸ್ ಸುಗಮ ಸಂಚಾರ ಸಲುವಾಗಿ ಹೊಸ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದು ಆಂಬುಲೆನ್ಸ್ ಚಾಲಕರು, ಆಸ್ಪತ್ರೆ ಮತ್ತು ಸಂಚಾರ ಪೊಲೀಸರ ಬಳಕೆ ಮಾತ್ರ ಅವಕಾಶ ಇರಲಿದೆ. ಚಾಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಎಲ್ಲಿಂದ ಎಲ್ಲಿಗೆ ಯಾವ ಉದ್ದೇಶಕ್ಕೆ ತೆರಳುತ್ತಿದೆ ಎಂಬ ಮಾಹಿತಿ ಅಪ್‌ಲೋಡ್ ಮಾಡಿದರೆ ಸಾಕು, ಅದನ್ನು ಸಂಚಾರ ಪೊಲೀಸರು ಗಮನಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಾರೆ. ಈಗಾಗಲೇ ಮೊಬೈಲ್ ಆ್ಯಪ್ ಪ್ರಯೋಗಿಕ ಪರೀಕ್ಷೆ ನಡೆಯುತ್ತಿದೆ. ಸಾಧಕ- ಬಾಧಕಗಳನ್ನು ಪರಿಶೀಲನೆ ನಡೆಸಿ ಅಂತಿಮವಾಗಿ ಆ್ಯಪ್‌ಗೆ ಚಾಲನೆ ನೀಡಲಾಗುತ್ತದೆ ಎಂದು ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net