

ಕಿಯೆವ್: ಪೂರ್ವ ಯೂಕ್ರೇನ್ನಲ್ಲಿ ರಷ್ಯಾದ ಗ್ಲೈಡ್ ಬಾಂಬ್ ದಾಳಿಯಿಂದಾಗಿ ಪಿಂಚಣಿ ಪಡೆಯಲು ಸಾಲಿನಲ್ಲಿ ನಿಂತಿದ್ದ ಕನಿಷ್ಠ 21 ಮಂದಿ ಸಾವಿಗೀಡಾದರು. ಅಲ್ಲದೆ ಈ ದಾಳಿಯಲ್ಲಿ ಸುಮಾರು 24 ಮಂದಿ ಗಾಯಗೊಂಡಿದ್ದಾರೆ ಎಂದು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.
ಡೊನೆಟ್ಸ್ಕ್ ಪ್ರದೇಶದ ಯರೊವಾ ಗ್ರಾಮದಲ್ಲಿ ಮಂಗಳವಾರ ಈ ಬಾಂಬ್ ದಾಳಿ ನಡೆದಿದೆ. ಇದನ್ನು ಭೀಕರ ದಾಳಿ ಎಂದಿರುವ ಝೆಲೆನ್ಸ್ಕಿ, ಅಂತಾರಾಷ್ಟ್ರೀಯ ಸಮುದಾಯ ಈ ಬಗ್ಗೆ ರಷ್ಯಾ ಸೂಕ್ತ ಬೆಲೆ ತೆರುವಂತೆ ಮಾಡಬೇಕು ಎಂದು ಟೆಲಿಗ್ರಾಂ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಜಗತ್ತು ಸುಮ್ಮನಿರಬಾರದು. ವಿಶ್ವಸಂಸ್ಥೆ, ಜಿ-20 ಇದಕ್ಕೆ ಪ್ರತಿಕ್ರಿಯಿಸಬೇಕು, ಯುರೋಪ್ ಕೂಡ ಪ್ರತಿಕ್ರಿಯಿಸಬೇಕು, ರಷ್ಯಾ ವಿರುದ್ಧ ಕಠಿಣ ಕ್ರಮ ಜರುಗಬೇಕು ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಇದು ಯುದ್ಧವಲ್ಲ, ಶುದ್ಧ ಭಯೋತ್ಪಾದನೆ ಎಂದು ಡೊನೆಟ್ಸ್ಕ್ ಗವರ್ನರ್ ವಡಿಮ್ ಫಿಲಾಷ್ಕಿನ್ ಹೇಳಿದ್ದಾರೆ. ಯರೊವಾ ಪ್ರದೇಶವನ್ನು ರಷ್ಯಾ 2022ರಲ್ಲಿ ವಶಪಡಿಸಿಕೊಂಡಿದ್ದು, ಬಳಿಕ ಅದೇ ವರ್ಷಾಂತ್ಯದಲ್ಲಿ ಯೂಕ್ರೇನ್ ಸಶಸ್ತ್ರ ಪಡೆಗಳು ಸ್ವಾಧೀನಕ್ಕೆ ಪಡೆದಿದ್ದವು.