ವೈದ್ಯ ಸೀಟಿಗಾಗಿ ಕಿವುಡರಾದ 21 ಮಂದಿ!

doctor (2)
Published on

ಎನ್.ಎಲ್. ಶಿವಮಾದು

ಬೆಂಗಳೂರು: ನಕಲಿ ವೈದ್ಯಕೀಯ ದಾಖಲೆ ಸೃಷ್ಟಿಸಿ ಅಂಗವಿಕಲ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲು ಯತ್ನಿಸಿದ 21 ಜಾಣ ಕಿವುಡರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವೈದ್ಯಕೀಯ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ.

ಸೀಟ್ ಬ್ಲಾಕಿಂಗ್ ದಂಧೆ ಸೇರಿ ಹತ್ತಾರು ಬಗೆಯಲ್ಲಿ ಸೀಟು ಪಡೆಯಲು ಪ್ರಯತ್ನಿಸುತ್ತಿರುವ ಕಳ್ಳಾಟದಲ್ಲಿ ಅಂಗವಿಕಲತೆ ಕೂಡ ಒಂದಾಗಿದೆ. ಈ ಘಟನೆ ವಿಶೇಷವಾಗಿದ್ದು ಅರ್ಜಿ ತಿದ್ದುಪಡಿ ಮಾಡಿ ಅಂಗವಿಕಲ ಕೋಟಾದಲ್ಲಿ ಸೀಟು ಕೇಳಿದ್ದೇ ಮುಳುವಾಗಿ ಪರಿಣಮಿಸಿದೆ.

ಅರ್ಜಿ ತಿದ್ದುಪಡಿ ಮಾಡಿ ಸಿಕ್ಕಿಬಿದ್ದರು:

ಸಿಇಟಿ ಮತ್ತು ಯುಜಿ ನೀಟ್ ಗೆ ಸೀಟು ಕೋರಿ 21 ಅಭ್ಯರ್ಥಿಗಳು ಅಂಗವಿಕಲ ಕೋಟಾದಡಿ ವೈದ್ಯಕೀಯ ಸೀಟು ಹಂಚಿಕೆ ಕೋರಿ ಅರ್ಜಿ ಸಲ್ಲಿಸಿದ್ದರು. ಆರಂಭದಲ್ಲಿ ಸಲ್ಲಿಸಿದ ಮೂಲ ಅರ್ಜಿಯಲ್ಲಿ ಮೀಸಲಾತಿ ಕೋರಿರಲಿಲ್ಲ. ಆದರೆ, ನಂತರ ಅರ್ಜಿ ತಿದ್ದುಪಡಿ ಮಾಡಿ ನೋಂದಣಿ ಮಾಡಿದ್ದಾರೆ. ತಮಗೆ ಶ್ರವಣದೋಷವಿದ್ದು ವೈದ್ಯಕೀಯ ಸೀಟು ಕೋರಿದ್ದಾರೆ.

ಅದರಂತೆ ಅಂಗವಿಕಲ ಕೋಟಾದಡಿ ಸೀಟು ಕೋರಿರುವ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಇಎನ್ ಟಿ ವಿಭಾಗದಲ್ಲಿ ತಪಾಸಣೆಗೆ ಒಳಪಡಿಸಲಾಗಿತ್ತು. ಅಲ್ಲಿಂದ ಆಡಿಯೋಗ್ರಾಂ ಮತ್ತು ಬೆರಾ ಪರೀಕ್ಷೆಗೆಂದು ನಿಮ್ಗಾನ್ಸ್ ಗೆ ಕಳುಗಿಸಲಾಗಿತ್ತು.

ಗೌಪ್ಯ ಪತ್ರದಲ್ಲಿ ವ್ಯಕ್ತವಾದ ಸಂಶಯ

ಅಭ್ಯರ್ಥಿಗಳ ಕಿವುಡುತನದ ನಕಲು ದಾಖಲೆಗಳನ್ನು ತಂದಿರುವುಸು ನಿಮ್ಹಾನ್ಸ್ ನಲ್ಲಿನ ತಪಾಸಣೆ ವೇಳೆ ಪತ್ತೆಯಾಗಿದೆ. ಅಂಗವಿಕಲ ಪ್ರಮಾಣಪತ್ರ ಪಡೆದಿರುವ ವೈದ್ಯಕೀಯ ಮಂಡಳಿ ಅಧ್ಯಕ್ಷರ ಸಹಿ/ಮೊಹರು ನಕಲಿಯಾಗಿದೆ. ಹಾಗೆಯೇ ವಿಜಯಪುರ ಜಿಲ್ಲೆ ಹೊಸಪೇಟೆಯಲ್ಲಿ ಪಡೆದಿರುವ ಯುಐಡಿ ಕಾರ್ಡ್ ಕೂಡ ನಕಲಾಗಿರುವುದು ನಿಮ್ಹಾನ್ಸ್ ನಲ್ಲಿ ಪತ್ತೆಯಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕರು ಕೆಇಎಗೆ ಬರೆದಿರುವ ಗೌಪ್ಯ ಪತ್ರದಲ್ಲಿ ಬಯಲಾಗಿದೆ.

ಮದ್ಯವರ್ತಿಗಳಿಂದ ಹೀಗಾಯ್ತು ಎಂದ ಪಾಲಕರು

21 ಮಂದಿಯಲ್ಲಿ ಐವರು ಪಾಲಕರು ತಮ್ಮ ಮಕ್ಕಳ ಪರಚಾಗಿ ಲಿಖಿತ ಮಾಹಿತಿ ನೀಡಿದ್ದಾರೆ.. ಮಧ್ಯವರ್ತಿಗಳು ವೈದ್ಯಕೀಯ ಸೀಟು ಕೊಡಿಸುವುದಾಗಿ ಐಡಿಯಾ ಕೊಟ್ಟಿದ್ದರಿಂದ ಅಂಗವಿಕಲರೆಂದು ಅರ್ಜಿ ತಿದ್ದುಪಡಿ ಮಾಡಲಾಯಿತು ಎಂದು ಪಾಲಕರು ಕೆಇಎ ಮುಂದೆ ಅವಲತ್ತುಕೊಂಡಿದ್ದಾರೆ.

ಕ್ರಮಕ್ಕೆ ಕೆಇಎ ಸೂಚನೆ ಪಾಲಕರು ಲಿಖಿತ ದೂರಿನಲ್ಲಿ ದಾಖಲಿಸಿರುವಂತೆ ಸೀಟು ಕೊಡಿಸುವುದಾಗಿ ಕೃತ್ಯದಲ್ಲಿ ಭಾಗಿಯಾಗಿರುವ ಮಧ್ಯವರ್ತಿಗಳು ಮತ್ತು 21 ಅಭ್ಯರ್ಥಿಗಳ ದಾಖಲೆಗಳ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಕೆಇಎ ನಿರ್ಧರಿಸಿದೆ. ಪ್ರಕರಣ ಸಂಬಂಧ ಕೆಇಎ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದೆ.

ವೈದ್ಯಕೀಯ ಸೀಟು ಹಂಚಿಕೆಯನ್ನು ಬಹಳ ಎಚ್ಚರಿಕೆ ವಹಿಸಿ ಹಂಚಿಕೆ ಮಾಡಲಾಗುತ್ತಿದೆ. ಅಂಗವಿಕಲರ ತಪಾಸಣೆ ವೇಳೆ ನಕಲಿ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿರುವುದು ಪತ್ತೆಯಾಗಿದೆ. - ಎಚ್. ಪ್ರಸನ್ನ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net