

ಕೆ.ಆರ್.ನಗರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತದ ವತಿಯಿಂದ ಆ.20ರಂದು ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜು ಅರಸು ಅವರ ಜನ್ಮದಿನ ಆಚರಿಸಲು ನಿರ್ಧರಿಸಲಾಯಿತು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಶಾಸಕ ಡಿ.ರವಿಶಂಕರ್ ಮಾತನಾಡಿ, ಆಚರಣೆ ವೇಳೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚಿಸಿದ ಅವರು, ಸಭೆಗೆ ಗೈರುಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಹಸೀಲ್ದಾರ್‌ಗೆ ಆದೇಶಿಸಿದರು.
ಅರಸು ಅವರ ಅನುಯಾಯಿಗಳು ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಮಾವನೂರು, ಬ್ಯಾಡರಹಳ್ಳಿ, ಮಾವತ್ತೂರು, ಮಳಲಿ, ನಿಜನಗನಹಳ್ಳಿ, ಹರದನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಇದ್ದಾರೆ. ಅಂದು ಕಾರ್ಯಕ್ರಮಕ್ಕೆ ಗ್ರಾಮಸ್ಥರು ಆಗಮಿಸಲು ವೈಯಕ್ತಿಕವಾಗಿ ವಾಹನ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಿಸಿಎಂ ಇಲಾಖೆಯಿಂದ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಈ ಬಗ್ಗೆ ದೂರವಾಣಿ ಮೂಲಕ ಸಮಾಜದ ಮುಖಂಡರಿಗೆ ತಿಳಿಸಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಅರಸು ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.
ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಇಒ ಎಚ್.ಕೆ.ಸತೀಶ್, ಬಿಸಿಎಂ ಅಧಿಕಾರಿ ಚಂದ್ರಕಲಾ, ಬಿಇಒ ಆರ್.ಕೃಷ್ಣಪ್ಪ, ಉಪನೋಂದಣಾಧಿಕಾರಿ ಅನಿತಾ, ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್.ಮಹೇಂದ್ರಪ್ಪ, ಸಮಾಜ ಕಲ್ಯಾಣಾಧಿಕಾರಿ ಎಸ್.ಎಂ.ಅಶೋಕ್‌ಕುಮಾರ್, ಶಿಕ್ಷಣ ಸಂಯೋಜಕ ದಾಸಪ್ಪ, ಪುರಸಭೆ ಸದಸ್ಯರಾದ ಜಾವಿದ್‌ಪಾಷ, ನಟರಾಜು, ಸಮಾಜದ ಮುಖಂಡರಾದ ಸುಬ್ಬರಾಜೇ ಅರಸ್, ಪ್ರತಾಪ್‌ರಾಜೇ ಅರಸ್, ಕೃಷ್ಣರಾಜೇ ಅರಸ್ ಮತ್ತಿತರರು ಹಾಜರಿದ್ದರು.