

ಚಿತ್ರದುರ್ಗ: ಕಾಂಗ್ರೆಸ್ಸಿಗರಲ್ಲಿ ಯಾವ ಗುಂಪುಗಾರಿಕೆಯೂ ಇಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಸರ್ಕಾರ ಸುಭದ್ರವಾಗಿದ್ದು, ನಾವೇ ಮುಂದುವರಿಯುತ್ತೇವೆ. 2028ಕ್ಕೂ ಅಧಿಕಾರಕ್ಕೆ ಬರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಗುರುವಾರ ಗಣಪತಿ, ಗಂಗಾಪೂಜೆಯೊಂದಿಗೆ ಗುರುವಾರ ಬಾಗಿನ ಸಮರ್ಪಿಸಿ, ಕಣಿವೆ ಮಾರಮ್ಮ ದೇವಿಯ ದರ್ಶನ ಪಡೆದು, ವಿವಿ ಸನ್ನಿಧಿಯಲ್ಲಿನ ಮೈಸೂರಿನ ಮಹಾರಾಣಿ ಕೆಂಪನಂಜಮ್ಮಣಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಳ್ಳುತ್ತಲಿದೆ. ಗುಂಪುಗಾರಿಕೆ ಹೆಚ್ಚಾಗಿದ್ದು, ಹೊಡೆದ ಮನೆಯಂತಾಗಿ ನಾಲ್ಕು ಬಣಗಳಾಗಿವೆ. ಆ ಪಕ್ಷದಿಂದಾಗಿ ರಾಜ್ಯದ ನೀರಾವರಿ ಯೋಜನೆಗಳಿಗೆ ಮೋಸವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮಳೆಗಾಗಿ ಪ್ರಾರ್ಥನೆ: ಸಮೃದ್ಧ ಮಳೆಯಾಗಿ ವಿವಿ ಸಾಗರ ಸೇರಿ ರಾಜ್ಯದ ಜಲಾಶಯಗಳು ಪ್ರತಿ ವರ್ಷ ತುಂಬಿ ಹರಿದು ರೈತರ ಬದುಕು ಹಸನಾಗುವಂತೆ ಗಂಗಾಮಾತೆ, ಮಾರಿಕಾಂಬೆ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ. ಜನರು ದೇವರಲ್ಲಿ ಬೇಡಿಕೊಳ್ಳಿ ಎಂದು ಸಲಹೆ ನೀಡಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಮೈಸೂರು ರಾಜಮನೆತನ ರಾಜ್ಯದ ನೀರಾವರಿ ಯೋಜನೆಗಳಿಗೆ ನೀಡಿದ ಕೊಡುಗೆ ಅಪಾರ. ಇದಕ್ಕೆ ಕಾಂಗ್ರೆಸ್ ಕೂಡ ಹೊರತಲ್ಲ. ಅಲ್ಲದೆ, ನಮ್ಮ ಪಕ್ಷಕ್ಕೆ ಆ ಮನೆತನದ ಮೇಲೆ ಸದಾ ಅಪಾರ ಗೌರವವಿದ್ದು, ಎಂದಿಗೂ ರಾಜಕೀಯ ಮಾಡಲಾರೆವು. ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಒಡೆಯರ್ ಸರ್ಕಾರಕ್ಕೂ ಮುನ್ನ ಬಾಗಿನ ಸಮರ್ಪಿಸಿದ್ದನ್ನು ಸ್ವಾಗತಿಸುತ್ತೇವೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಡಿ.ಸುಧಾಕರ್, ಮಾಜಿ ಸಚಿವ ಎಚ್.ಆಂಜನೇಯ, ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ, ಎಂಎಲ್ಸಿ ಡಿ.ಟಿ.ಶ್ರೀನಿವಾಸ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಇತರರಿದ್ದರು.