2025ಕ್ಕೆ ಮೈಸೂರು ಮಾನಂದವಾಡಿ ಜೋಡಿ ರಸ್ತೆ ನಿರ್ಮಾಣ

ಅಭಿನಂದನಾ ಕಾರ್ಯಕ್ರಮ
ಎಚ್.ಡಿ.ಕೋಟೆ ಪಟ್ಟಣದ ಬಾಬು ಜಗಜೀವನ ರಾಮ್ ಭವನದ ಆವರಣದಲ್ಲಿ ಬಾಬು ಜಗಜೀವನ ರಾಮ್ ವಿಚಾರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಸನ್ಮಾನಿಸಿದರು. ತಿಮ್ಮಯ್ಯ, ಪರಶಿವ ಮೂರ್ತಿ, ಉಡ ನಾಗರಾಜು, ಶಿವಯ್ಯ ಇದ್ದರು.
Published on

ಎಚ್.ಡಿ.ಕೋಟೆ : 2025ರ ವೇಳೆಗೆ 920 ಕೋಟಿ ರೂ. ವೆಚ್ಚದಲ್ಲಿ ಮೈಸೂರು-ಮಾನಂದವಾಡಿ ಜೋಡಿ ರಸ್ತೆ ನಿರ್ಮಾಣವಾಗಲಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದಲ್ಲಿ ಬಾಬು ಜಗಜೀವನ ರಾಮ್ ವಿಚಾರ ವೇದಿಕೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಗೂರು ತಾಲೂಕಿನಲ್ಲಿ ಬಾಬು ಜಗಜೀವನ ರಾಮ್ ಸಮುದಾಯ ಭವನಕ್ಕೆ ಉಚಿತವಾಗಿ ನಿವೇಶನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣ ಮಾಡಿರುವ ಸಮುದಾಯ ಭವನಗಳನ್ನು ನಿರ್ವಹಣೆ ಮಾಡಲು ಆಯಾ ಸಮುದಾಯಕ್ಕೆ ನೀಡದೆ ಇಲಾಖೆಗೆ ಜವಾಬ್ದಾರಿ ನೀಡಿ ಕೆಲಸ ಮಾಡಲಾಗುತ್ತಿದೆ. ಸಮುದಾಯದ ಮೂವರನ್ನು ನಿರ್ವಹಣಾ ಸಮಿತಿಗೆ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಭವನವನ್ನು ಸಮುದಾಯದ ವಶಕ್ಕೆ ನೀಡಲು ಮನವಿ ಮಾಡಲಾಗುವುದು ಎಂದರು.

ಸಮಾಜ ಕಟ್ಟುವಲ್ಲಿ ಕೆಲಸ ಯುವಕರ ಪಾತ್ರ ಮುಖ್ಯವಾಗಿದೆ. ತಾಲೂಕಿನಲ್ಲಿ ನಮ್ಮ ಕುಟುಂಬ 10 ವರ್ಷಗಳ ಕಾಲ ಜನಸೇವೆ ಮಾಡಿದ್ದರಿಂದ ನನಗೆ ಎರಡನೆಯ ಅವಧಿಗೆ ಶಾಸಕನಾಗಲು ಜನರು ಆರ್ಶೀವಾದ ಮಾಡಿದ್ದಾರೆ. ಸಮುದಾಯಗಳ ಅಭಿವೃದ್ಧಿ ಒಗ್ಗಟ್ಟಾಗಿ ಕಾರ್ಯಕ್ರಮ ರೂಪಿಸಿ ಸಮುದಾಯಕ್ಕೆ ಸಾಮಾಜಿಕವಾಗಿ, ಆರ್ಥಿಕ ಹಾಗೂ ರಾಜಕೀಯ ಶಕ್ತಿಯನ್ನು ನೀಡಬೇಕು ಎಂದರು.

ಮಾಜಿ ಸಚಿವ ಎಂ.ಶಿವಣ್ಣ ಮಾತನಾಡಿ, ಅತೀ ಕಿರಿಯ ವಯಸ್ಸಿನಲ್ಲಿ ಶಾಸಕರಾಗಿ ತಾಲೂಕಿನ ಅಭಿವೃದ್ಧಿಗೆ ಅನೀಲ್ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಧಿಕಾರ ದೊರಕಿ ತಾಲೂಕನ್ನು ಅಭಿವೃದ್ಧಿ ಮಾಡಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಕೊತ್ತೆಗಾಲ ತಿಮ್ಮಯ್ಯ, ಪರಶಿವ ಮೂರ್ತಿ, ಶಿವಯ್ಯ, ಶಾಂತಮ್ಮ, ಉಡ ನಾಗರಾಜು, ಪಟೇಲ್ ಸೋಮು, ರೂಪಾ, ಪ್ರಸಾದ್, ರವೀಶ್, ರಾಜೇಶ್ವರಿ, ಸಣ್ಣತಾಯಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net