2020ರ ದೆಹಲಿ ಗಲಭೆ ಪ್ರಕರಣ: ಆಡಳಿತ ಬದಲಾವಣೆಯ ಪ್ರಯತ್ನ ಎಂದು ಸುಪ್ರೀಂ​ಗೆ ಅಫಿಡವಿಟ್‌ ದೆಹಲಿ ಪೊಲೀಸರು | Delhi Riots Case

Delhi Riots Case
Published on

ನವದೆಹಲಿ: 2020ರ ದೆಹಲಿ ಗಲಭೆ ಪ್ರಕರಣದಲ್ಲಿ(Delhi Riots Case) ಆಘಾತಕಾರಿ ಸಂಗತಿ ಹೊರಬಿದ್ದಿದೆ. ಈ ಹಿಂಸಾಚಾರವು ಆಡಳಿತ ಬದಲಾವಣೆ ಗುರಿಯನ್ನು ಹೊಂದಿರುವ ಪಿತೂರಿಯ ಭಾಗವಾಗಿತ್ತು. ಅಲ್ಲದೆ, ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಸೇರಿದಂತೆ ಆರೋಪಿಗಳು ಸಲ್ಲಿಸಿದ ಜಾಮೀನು ಅರ್ಜಿಗಳನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ 177 ಪುಟಗಳ ಅಫಿಡವಿಟ್‌ನಲ್ಲಿ ಈ ಸಂಗತಿಗಳನ್ನು ಬಹಿರಂಗಪಡಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ವರದಿ ಮಾಡಿದೆ.

ಈ ಬಗ್ಗೆ ಪೊಲೀಸರು ತಮ್ಮ ಹೇಳಿಕೆಯನ್ನು ಮಾಧ್ಯಮ ಸಂಸ್ಥೆ ಉಲ್ಲೇಖಿಸಿದ್ದು, ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ಸಾರ್ವಜನಿಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಮತ್ತು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಹೊಡೆತ ನೀಡಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸರು ಈ ಹಿಂಸಾಚಾರವನ್ನು ಸಂಘಟಿತವಾಗಿ ನಡೆಸಲಾಗಿದೆ ಎಂದು ಹೇಳಿದ್ದಾರೆ. ಇದು ಒಂದು ಪ್ರತ್ಯೇಕ ಘಟನೆಯಲ್ಲ, ಆದರೆ ಕರ್ನಾಟಕ, ಕೇರಳ ಮತ್ತು ಅಸ್ಸಾಂ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಇದೇ ರೀತಿಯ ಮಾದರಿಗಳನ್ನು ಅನುಸರಿಸಲಾಗಿದೆ ಎಂದು ಪಡೆ ಹೇಳಿದೆ.

ಈ ಪ್ರಕರಣದ ಆರೋಪಿಗಳು ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಮತ್ತು ಸಂಘಟಿತ ತಂತ್ರಗಳ ಮೂಲಕ ನ್ಯಾಯಾಲಯದ ವಿಚಾರಣೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ. ದೆಹಲಿ ಪೊಲೀಸರು ಸಲ್ಲಿಸಿದ ಅಫಿಡವಿಟ್ ಅನ್ನು ಸುಪ್ರೀಂ ಕೋರ್ಟ್ ಇನ್ನೂ ಪರಿಶೀಲಿಸಿಲ್ಲ.

ದೆಹಲಿ ಪೊಲೀಸರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ವಕೀಲರಾದ ರಜತ್ ನಾಯರ್ ಮತ್ತು ಧ್ರುವ್ ಪಾಂಡೆ ಅವರು ವಾದ ಮಂಡಿಸಿದರು. ಫೆಬ್ರವರಿ 2020 ರ ದೆಹಲಿ ಗಲಭೆಯ ಹಿಂದಿನ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದ ಯುಎಪಿಎ ಪ್ರಕರಣದಲ್ಲಿ ಕಾರ್ಯಕರ್ತರಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ ಮತ್ತು ಮೀರನ್ ಹೈದರ್​ರ ಜಾಮೀನು ಅರ್ಜಿಗಳಿಗೆ ಉತ್ತರ ಸಲ್ಲಿಸಲು ದೆಹಲಿ ಪೊಲೀಸರಿಗೆ ಎರಡು ವಾರಗಳ ಕಾಲಾವಕಾಶ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿತ್ತು.

2020ರಲ್ಲಿ ಆಗಿದ್ದೇನು..?

2020 ರ ಫೆಬ್ರವರಿಯಲ್ಲಿ ಆಗ ಪ್ರಸ್ತಾವಿತ ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರುದ್ಧದ ಘರ್ಷಣೆಗಳ ನಂತರ ಗಲಭೆಗಳು ನಡೆದವು. ದೆಹಲಿ ಪೊಲೀಸರ ಪ್ರಕಾರ, ಗಲಭೆಯಲ್ಲಿ 53 ಜನರು ಸಾವನ್ನಪ್ಪಿದರು ಮತ್ತು ನೂರಾರು ಜನರು ಗಾಯಗೊಂಡಿದ್ದರು.

2019ರ ಡಿಸೆಂಬರ್​ನಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸಿದ ಆರಂಭಿಕ ಸಂಘಟಕರಲ್ಲಿ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಸೇರಿದ್ದಾರೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಅಲ್ಲದೆ, ಭಾಷಣಗಳು, ಕರಪತ್ರಗಳು ಮತ್ತು ವಾಟ್ಸಾಪ್ ನೆಟ್‌ವರ್ಕ್‌ಗಳ ಮೂಲಕ ಜನಸಮೂಹವನ್ನು ಸಜ್ಜುಗೊಳಿಸಿದರು. ಇದು ಅಂತಿಮವಾಗಿ ಹಿಂಸಾಚಾರವನ್ನು ಪ್ರಚೋದಿಸಲು ಸಂಘಟಿತ ಯೋಜನೆಯಾಗಿ ವಿಕಸನಗೊಂಡಿತು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಗಲಭೆ ನಡೆದ ಸ್ಥಳಗಳಲ್ಲಿ ಅವರು ಭೌತಿಕವಾಗಿ ಇರಲಿಲ್ಲ ಎಂಬ ಅಂಶವು ಅವರನ್ನು ದೋಷಮುಕ್ತಗೊಳಿಸಲಿಲ್ಲ. ಏಕೆಂದರೆ ಆಪಾದಿತ ಪಿತೂರಿಯನ್ನು ಹಿಂಸಾಚಾರ ಸ್ಫೋಟಗೊಳ್ಳುವ ಮೊದಲೇ ಕಲ್ಪಿಸಲಾಗಿತ್ತು ಮತ್ತು ಕಾರ್ಯಗತಗೊಳಿಸಲಾಗಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ದೆಹಲಿ ಪೊಲೀಸರು ತಮ್ಮ ವಾದಗಳಲ್ಲಿ ಅವರನ್ನು ಪಿತೂರಿಯ ಪ್ರಮುಖ ಆರೋಪಿಗಳು ಎಂದು ಬಣ್ಣಿಸಿದ್ದಾರೆ. ಆದರೆ ಆರೋಪಿಗಳು ತಮ್ಮ ಕ್ರಮಗಳು ಭಿನ್ನಾಭಿಪ್ರಾಯದ ಸಾಂವಿಧಾನಿಕ ಹಕ್ಕಿನ ಮಿತಿಯಲ್ಲಿದ್ದಾರೆ ಮತ್ತು ಹಿಂಸಾಚಾರದ ಸ್ಫೋಟಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಿರಂತರವಾಗಿ ಪ್ರತಿಪಾದಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net