

ಬೆಂಗಳೂರು: ಸಾಕುಪ್ರಾಣಿಗಳ ಆರೈಕೆಗೆ ಸಂಬಂಧಿಸಿದ ಉತ್ಪನ್ನಗಳ ಮಾರುಕಟ್ಟೆಯು ಸದ್ಯಕ್ಕೆ ರಾಜ್ಯದಲ್ಲಿ ವಾರ್ಷಿಕ 8 ಸಾವಿರ ಕೋಟಿ ರೂ.ಗಳಷ್ಟಿದೆ. ಇದು 2025ರ ಹೊತ್ತಿಗೆ 20 ಸಾವಿರ ಕೋಟಿ ರೂಪಾಯಿ ತಲುಪುವ ನಿರೀಕ್ಷೆ ಇದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಪೆಟ್ ಪ್ರಾಕ್ಟೀಷನರ್ಸ್ ಆಫ್ ಕರ್ನಾಟಕ (ಪಿಪಿಎಕೆ) ಸಂಘಟನೆಯು ಮಂಗಳವಾರ ನಗರದ ಹೊರವಲಯದಲ್ಲಿ ಏರ್ಪಡಿಸಿದ್ದ ವೆಟೋಪಿಯಾ ಸಮಾವೇಶದಲ್ಲಿ ಸಾಕುಪ್ರಾಣಿಗಳ ಆಹಾರ ಮತ್ತು ಔಷಧಿಗಳು ಹಾಗೂ ಆಧುನಿಕ ತಂತ್ರಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿ ಮಾತನಾಡಿ ಸಚಿವರು, ಕೈಗಾರಿಕಾ ಸಚಿವನಾಗಿ ನಾನು ಈ ಉದ್ಯಮದ ಮಹತ್ವವನ್ನು ಬಲ್ಲೆ. ಸಾಕುಪ್ರಾಣಿಗಳಿಗೆ ಸಂಬಂಧಿಸಿದ ಆರೈಕೆಯು ಈಗ ಕೇವಲ ಚಿಕಿತ್ಸೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಅದು ಸಮಗ್ರ ಪೋಷಣೆಯಾಗಿ ಬೆಳೆದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಚ್ಚಿದ ಕೋಣೆಯಲ್ಲಿ ಪ್ರಿಯಕರನ ಜತೆ ಮಗಳನ್ನು ನೋಡಿದ ತಂದೆ: ಮುಂದೆ ನಡೆದದ್ದು ದುರಂತ..
ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಈಗ ಹೊಸ ಅರ್ಥ ಪಡೆದುಕೊಂಡಿದೆ. ಮಹಾತ್ಮ ಗಾಂಧಿಯವರು ಸಾಕುಪ್ರಾಣಿಗಳ ಬಗ್ಗೆ ಇಡೀ ಸಮಾಜವು ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ಹೇಳುತ್ತಿದ್ದರು. ನಮ್ಮ ಮನೆಯಲ್ಲೂ ತಮ್ಮ ಪತ್ನಿ ಮತ್ತು ಕಿರಿಯ ಪುತ್ರನಿಗೆ ಸಾಕುನಾಯಿಗಳ ಪೋಷಣೆ ಅಚ್ಚುಮೆಚ್ಚಿನ ಹವ್ಯಾಸವಾಗಿದೆ. ಕರ್ನಾಟಕವು ಆರೋಗ್ಯ ತಂತ್ರಜ್ಞಾನದ ತಾಣವಾಗಿದೆ. ಇದರಲ್ಲಿ ನಾವೀನ್ಯತೆ ಮತ್ತು ಸುಸ್ಥಿರತೆಯ ಅಂಶಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು, ಈ ಕಾರ್ಯಕ್ರಮದಲ್ಲಿ ಪಿಪಿಎಕೆ ಅಧ್ಯಕ್ಷ ಡಾ.ಎಸ್ ಯತಿರಾಜ್, ಉಪಾಧ್ಯಕ್ಷ ಡಾ.ನರೇಂದ್ರ ವೇದಿಕೆಯಲ್ಲಿದ್ದು, ದೇಶ-ವಿದೇಶಗಳಿಂದ ಬಂದಿದ್ದ 600ಕ್ಕೂ ಹೆಚ್ಚು ಪಶುವೈದ್ಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.(ಏಜೆನ್ಸೀಸ್)