

ನವದೆಹಲಿ: ಭಾರತೀಯ ರೈಲ್ವೆ ಜೂ.1ರಿಂದ 200 ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸುತ್ತಿದೆ. ಇಂದು ಮಧ್ಯರಾತ್ರಿ 12 ಗಂಟೆಯಿಂದಲೇ ರೈಲುಗಳ ಸಂಚಾರ ಆರಂಭವಾಗಲಿದ್ದು, ಮೊದಲ ದಿನ ಅಂದಾಜು 1.45 ಲಕ್ಷ ಜನರು ಈ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಹಾಲಿ ಸಂಚರಿಸುತ್ತಿರುವ ಶ್ರಮಿಕ್ ಸ್ಪೆಶಲ್ ಮತ್ತು 30 ವಿಶೇಷ ಎಸಿ ರೈಲುಗಳ ಜತೆಗೆ ಈ 200 ವಿಶೇಷ ರೈಲುಗಳು ಸಂಚರಿಸಲಿವೆ.
ಜೂ.1ರಿಂದ ಜೂ.30ರವರೆಗೆ ಈ ರೈಲುಗಳಲ್ಲಿ ಸಂಚರಿಸಲು ಐಆರ್ಸಿಟಿಸಿ ವೆಬ್ಸೈಟ್ ಮತ್ತು ಆ್ಯಪ್ಗಳಲ್ಲದೆ ರೈಲು ನಿಲ್ದಾಣಗಳಲ್ಲಿನ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಕೇಂದ್ರಗಳಲ್ಲಿ ಅಂದಾಜು 26 ಲಕ್ಷಕ್ಕೂ ಹೆಚ್ಚು ಜನರು ಟಿಕೆಟ್ ಮುಂಗಡ ಕಾಯ್ದಿರಿಸಿದ್ದಾರೆ.
90 ನಿಮಿಷ ಮೊದಲೇ ಬರಬೇಕು: ವಿಶೇಷ ರೈಲುಗಳ ಪ್ರಯಾಣಿಕರು ತಮ್ಮ ರೈಲುಗಳು ಹೊರಡುವ 90 ನಿಮಿಷ ಮೊದಲೇ ರೈಲು ನಿಲ್ದಾಣಕ್ಕೆ ಬರುವುದು ಕಡ್ಡಾಯವಾಗಿದೆ. ಟಿಕೆಟ್ ಕನ್ಫರ್ಮ್ ಆದವರು ಮತ್ತು ಆರ್ಎಸಿ ಆಗಿರುವ ಟಿಕೆಟ್ಗಳನ್ನು ಹೊಂದಿರುವವರು ಮಾತ್ರ ರೈಲು ನಿಲ್ದಾಣಕ್ಕೆ ಬಂದು ರೈಲು ಹತ್ತಬಹುದಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.