

ಬೆಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಎರಡು ಬಗೆಯ ವೃದ್ಧಾಪ್ಯ ವೇತನವನ್ನು ಪರಿಷ್ಕರಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಘೋಷಣೆಗೆ ಮಂಗಳವಾರ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಮೂಲಕ 36 ಲಕ್ಷ ಹಿರಿಯ ಫಲಾನುಭವಿಗಳಿಗೆ ತಕ್ಷಣದಿಂದಲೇ ಮಾಸಿಕ 200 ರೂ. ಹೆಚ್ಚು ಪಿಂಚಣಿ ಸಿಗಲಿದೆ.
ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಎರಡು ಹಂತಗಳಿವೆ. 60 ವರ್ಷ ಮೇಲ್ಪಟ್ಟವರಿಗೆ ಮತ್ತು 65 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ 65 ವರ್ಷ ಮೇಲ್ಪಟ್ಟವರಿಗೆ 600 ರೂ. ನೀಡುತ್ತಿದ್ದರೆ, ರಾಜ್ಯ ಸರ್ಕಾರ 60 ವರ್ಷ ಮೇಲ್ಪಟ್ಟವರಿಗೆ ಒಂದು ಸಾವಿರ ರೂ. ನೀಡುತ್ತಿದೆ. ಈ ಎರಡೂ ಯೋಜನೆಗಳಿಗೆ ಅನ್ವಯವಾಗುವಂತೆ 200 ರೂ. ನೀಡಲು ಉದ್ದೇಶಿಸಿ ಈ ಸಂಬಂಧ ಆದೇಶವನ್ನೂ ಹೊರಡಿಸಲಾಗಿದೆ. ಈ ತೀರ್ವನಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಫಲಾನುಭವಿಗಳಿಗೂ 200 ರೂ. ಹೆಚ್ಚಿಗೆ ಪಿಂಚಣಿ ಸಿಗಲಿದೆ. ಈ ತೀರ್ವನದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 207 ಕೋಟಿ ರೂ. ಹೆಚ್ಚು ಹೊರೆ ಬೀಳಲಿದೆ.
ಮೈಷುಗರ್ ಬಿಕ್ಕಟ್ಟಿಗೆ ಶೀಘ್ರ ತೆರೆ?: ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಖಾಸಗಿಗೆ ಕೊಡಬೇಕೇ ಅಥವಾ ಸರ್ಕಾರ ನಿರ್ವಹಿಸಬೇಕೆ ಎಂಬ ವಿಚಾರ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಈ ವಿಚಾರದಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲು ಸಂಪುಟ ಸಮಿತಿ ರಚನೆಯಾಗಿದೆ. ಈ ಸಮಿತಿಯ ಶಿಫಾರಸು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟ ತೀರ್ಮಾನ ಮಾಡಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ಇದೇ ವೇಳೆ ವರದಿಯನ್ನು ಶೀಘ್ರವೇ ಕೊಡಲು ಸಂಪುಟ ಸಭೆ ಉಪ ಸಮಿತಿಗೆ ಸೂಚಿಸಿತು. ಸಂಪುಟ ಉಪ ಸಮಿತಿಯಲ್ಲಿ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ನಾರಾಯಣ ಗೌಡ, ಗೋವಿಂದ ಕಾರಜೋಳ, ಆರ್.ಅಶೋಕ್ ಇರಲಿದ್ದಾರೆ. ಕಾರ್ಖಾನೆಯನ್ನು ಖಾಸಗಿಗೆ ಕೊಡಬಾರದೆಂದು ತೀವ್ರ ವಿರೋಧ ಬಂದ ಹಿನ್ನೆಲೆಯಲ್ಲಿ ಸಂಪುಟ ಉಪ ಸಮಿತಿ ರಚಿಸಿ, ಅಧ್ಯಯನ ಮಾಡಿ ತೀರ್ವನಿಸಲು ನಿರ್ಧರಿಸಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಎಸ್ಐ ಬಡ್ತಿ ಸೇವಾವಧಿ ಕಡಿತ: ಪೊಲೀಸರ ಸಹಾಯಕ ಸಬ್ ಇನ್ಸ್ಪೆಕ್ಟರ್ ಹುದ್ದೆಯಿಂದ ಸಬ್ ಇನ್ಸೆ್ಪಕ್ಟರ್ ಹುದ್ದೆಗೆ ಬಡ್ತಿ ಪಡೆಯಲು ಇದ್ದ ಕನಿಷ್ಠ ಸೇವಾವಧಿ ವರ್ಷಗಳನ್ನೂ ಕಡಿತ ಮಾಡುವ ನಿರ್ಧಾರವನ್ನು ಸಂಪುಟ ಕೈಗೊಂಡಿದೆ. ಗೃಹ ಇಲಾಖೆಯ ಪ್ರಸ್ತಾವನೆಯಂತೆ ಎಎಸ್ಐ ಸಿಬ್ಬಂದಿಗೆ ಮುಂದಿನ ಶ್ರೇಣಿಗೆ ಬಡ್ತಿ ಪಡೆಯಲು ಪ್ರಸ್ತುತ ಇದ್ದ 5 ವರ್ಷಗಳ ಕನಿಷ್ಠ ಸೇವಾ ಅವಧಿಯನ್ನು 4 ವರ್ಷಕ್ಕೆ ಇಳಿಸಲು ಒಪ್ಪಿಗೆ ನೀಡಲಾಗಿದೆ. ಈ ಕಾರಣಕ್ಕೆ ಕರ್ನಾಟಕ ರಾಜ್ಯ ಪೊಲೀಸ್ ಲಿಪಿಕ ಸೇವೆಗಳನ್ನೊಳಗೊಂಡಂತೆ (ನೇಮಕಾತಿ) (ತಿದ್ದುಪಡಿ) ನಿಯಮಗಳು, 2021ಕ್ಕೆ ಮಂಗಳವಾರ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ. ಒಂದು ಕೇಡರ್ನಿಂದ ಇನ್ನೊಂದು ಕೇಡರ್ಗೆ ಬಡ್ತಿ ಆಗಬೇಕೆಂದರೆ ಕನಿಷ್ಠ 8 ವರ್ಷ ಸೇವೆ ಸಲ್ಲಿಸಬೇಕು. ಅಭ್ಯರ್ಥಿಗಳು ಲಭ್ಯ ಇಲ್ಲದಿದ್ದರೆ ಐದು ವರ್ಷ ಎಂದಿತ್ತು. ಅದನ್ನು ನಾಲ್ಕು ವರ್ಷಕ್ಕೆ ಇಳಿಸಲಾಗಿದೆ. ಇದರಿಂದ ಪೊಲೀಸ್ ಇಲಾಖೆಯಲ್ಲಿ ಅರ್ಹ ಅಭ್ಯರ್ಥಿಗಳಿಲ್ಲದೆ ಬಡ್ತಿ ತಡೆಯಾಗಿದ್ದರೆ, ಇನ್ನು ಮುಂದೆ ಸುಲಲಿತವಾಗಿ ನಡೆಯುವುದು. ಪೊಲೀಸ್ ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್, ಎಸ್ಐವರೆಗೂ ಈ ತಿದ್ದುಪಡಿ ಅನ್ವಯವಾಗಲಿದೆ. ಅದೇ ರೀತಿ ಪೊಲೀಸ್ ಆಧುನೀಕರಣ ಯೋಜನೆಯಡಿ ಬೆಂಗಳೂರಿಗೆ ಅತ್ಯಾಧುನಿಕ ಡಿಜಿಟಲ್ ಯುಎಚ್ಎಫ್ ರೇಡಿಯೋ ಸಂಪರ್ಕ ವ್ಯವಸ್ಥೆಗೆ 14.65 ಕೋಟಿ ರೂ. ವಿನಿಯೋಗಿಸಲು ಸಂಪುಟ ಒಪ್ಪಿಗೆ ನೀಡಿದೆ.
ದತ್ತಪೀಠ, ಉಪ ಸಮಿತಿ ಅಸ್ತಿತ್ವಕ್ಕೆ: ದತ್ತ ಪೀಠದ ವಿಚಾರವಾಗಿ ಕೋರ್ಟ್ ನೀಡಿರುವ ತೀರ್ವನವನ್ನು ಯಾವ ರೀತಿ ಅನುಷ್ಠಾನಗೊಳಿಸಬೇಕು ಎಂದು ನಿರ್ಧರಿಸಲು ಸಂಪುಟ ಉಪ ಸಮಿತಿ ರಚಿಸಲಾಗಿದೆ. ತೀರ್ವನದ ಸಾಧಕ ಬಾಧಕ, ಮುಂದಿನ ಪ್ರಕ್ರಿಯೆ, ಹೈಕೋರ್ಟಲ್ಲಿ ಅಫಿಡವಿಟ್ ಹಾಕಬೇಕೇ ಎಂಬ ಬಗ್ಗೆ ಈ ಸಂಪುಟ ಉಪ ಸಮಿತಿ ಚರ್ಚೆ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಕಾನೂನು ಸಚಿವರ ನೇತೃತ್ವದ ಸಮಿತಿಯಲ್ಲಿ ಸಚಿವರಾದ ಆರ್.ಅಶೋಕ್, ಸುನೀಲ್, ಶಶಿಕಲಾ ಜೊಲ್ಲೆ ಇರುತ್ತಾರೆ.