20 ವರ್ಷದ ಹಿಂದಿನ ನಿವೇಶನ ಹಂಚಿಕೆ ಕೆದಕಿದ ಕಾಂಗ್ರೆಸ್

Indian_National_Congress_hand_logo
Published on

ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಎರಡು ದಶಕದ ಹಿಂದೆ ನಡೆದ ನಿವೇಶನ ಹಂಚಿಕೆಯನ್ನು ಕೆದಕಿರುವ ಕಾಂಗ್ರೆಸ್, ದಾಖಲೆ ಮುಂದಿಟ್ಟು ಬಿಜೆಪಿಯನ್ನು ಕೆಣಕಿದೆ.

ಬಿಜೆಪಿಯವರೇ ನೀವು ಏಕೆ ತಟಸ್ಥವಾಗಿ ಇದ್ದೀರಾ? 2011 ರಲ್ಲಿ ನೀವೇ ಕೊಟ್ಟಿರುವ ದಾಖಲೆಗಳ ಮೇಲೆ ಮಾತಾನಾಡಿ, ನಿಮ್ಮದೇ ಮುಖ್ಯಮಂತ್ರಿ, ಸಭಾಪತಿ ಇದ್ದರು ಏಕೆ ತನಿಖೆ ಮಾಡಲಿಲ್ಲ. ಸಣ್ಣ, ಸಣ್ಣ ವಿಚಾರಕ್ಕೂ ಶೋಭಕ್ಕ, ರವಿಕುಮಾರ್, ಸಿ.ಟಿ.ರವಿ ಅವರು ರಾಜ್ಯಪಾಲರ ಮನೆ ಬಾಗಿಲು ತಟ್ಟುತ್ತಾರೆ. ರಾಜ್ಯಪಾಲರ ಮನೆಯನ್ನು ಮಾವನ ಮನೆ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು 2011 ರ ಮಾರ್ಚ್ 17 ರಂದು ವಿಷಯ ಪ್ರಸ್ತಾಪಿಸಿ ಮುಡಾದಲ್ಲಿ ಒಂದೇ ಕುಟುಂಬದವರು 48 ಸೈಟು ತೆಗೆದುಕೊಳ್ಳುತ್ತಾರೆ. ಇದರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು 300/200 ಚದರ ಅಡಿ ಸೈಟ್ ನಂಬರ್ 17 (ಬಿ), ಸವಿತಾ ಎನ್ನುವವರಿಗೆ ಸೈಟ್ 17 (ಬಿ 1) 75/201 ಚದರ ಅಡಿ ಅನ್ನು ದೇವೇಗೌಡರು ಸಿಎಂ ಆಗಿದ್ದ ಕಾಲದಲ್ಲಿ ನೀಡಲಾಗಿದೆ ಎಂದು ಯಡಿಯೂರಪ್ಪ ಅವರು ಹೇಳಿದ್ದರು. ದೇವೇಗೌಡರು ಸೊಸೆಯಂದಿರಿಗೆ 48 ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದರು. ಇದನ್ನು ಹಗಲು ದರೋಡೆ ಎಂದು ಯಡಿಯೂರಪ್ಪ ಅವರು ಸದನದಲ್ಲಿ ಚರ್ಚೆ ಆಗ್ರಹಿಸಿದ್ದರು ಎಂದು ನೆನಪಿಸಿದರು.

ವಿಧಾನಪರಿಷತ್ತಿನ ನಡಾವಳಿಗಳ ಪ್ರಕಾರ ಯಾವುದೇ ಅಕ್ರಮದ ಬಗ್ಗೆ ಪ್ರಸ್ತಾಪ ಮಾಡಿದರೆ ತನಿಖೆ ನಡೆಸಬೇಕು ಎನ್ನುವ ನಿಯಮ ಮಾಡಿಕೊಳ್ಳಲಾಗಿದೆ. ಆದರೆ ಬಿಜೆಪಿಯವರು ಬಾಯಿಯೇ ಬಿಡುತ್ತಿಲ್ಲ ಎಂದರು.

ಕಾಂಗ್ರೆಸ್‌ನಿಂದ 2024ರ ಜುಲೈ 9ರಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದು, 48 ಸೈಟು ಹಂಚಿಕೆಗಳ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಯಡಿಯೂರಪ್ಪ ಅವರು 2011 ರಲ್ಲಿ ಇದರ ಬಗ್ಗೆ ದಾಖಲೆಗಳನ್ನು ನೀಡಿದ್ದಾರೆ. ಅದಕ್ಕೆ ನಾವು ಸಹ ತನಿಖೆ ನಡೆಯಬೇಕು ಎಂದು ಪತ್ರ ಬರೆದಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net