ಮಕ್ಕಳ 20 ತಿಂಗಳ ವನವಾಸ ಅಂತ್ಯ : 1ರಿಂದ 5ನೇ ತರಗತಿಗಳು ಆರಂಭ ನಿರೀಕ್ಷಿತ ಮಟ್ಟದಲ್ಲಿ ಹಾಜರಾಗದ ವಿದ್ಯಾರ್ಥಿಗಳು

25-10-rama-school2
Published on

ರಾಮನಗರ :  ಕಳೆದ 20 ತಿಂಗಳ ವನವಾಸದ ನಂತರ ಆರಂಭಗೊಂಡಿರುವ 1 ರಿಂದ 5ನೇ ತರಗತಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ವಿದ್ಯಾರ್ಥಿಗಳು ಬಂದಿಲ್ಲವಾದರೂ, ಬಂದ ಮಕ್ಕಳು ಖುಷಿಯಿಂದ ಸಂಭ್ರಮಿಸಿದ್ದಾರೆ.

ಜಿಲ್ಲೆಯಲ್ಲಿ 1-5ನೇ ತರಗತಿವರೆಗೂ ಸುಮಾರು 66 ಸಾವಿರ ಮಕ್ಕಳು ಶಾಲೆಗೆ ದಾಖಲಾಗಿದ್ದು, ಇವರಲ್ಲಿ ಆರಂಭ ದಿನವಾದ ಸೋಮವಾರ ನಿರೀಕ್ಷಿತ ಪ್ರಮಾಣದಲ್ಲಿ ಮಕ್ಕಳು ಶಾಲೆಗಳಿಗೆ ಆಗಮಿಸಿರಲಿಲ್ಲ. ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಒಟ್ಟಾರೆ 1.40 ಲಕ್ಷ ಮಕ್ಕಳು ದಾಖಲಾಗಿದ್ದು, ಇವರಲ್ಲಿ ಸೋಮವಾರ 65 ಸಾವಿರ ಮಕ್ಕಳು ಶಾಲೆಗೆ ಆಗಮಿಸಿದ್ದಾರೆ. ಇದರೊಂದಿಗೆ ಹಾಜರಾತಿ ಪ್ರಮಾಣ ಶೇ.49ರಷ್ಟು ಆಗಿದೆ. ಆದರೆ 1-5ನೇ ತರಗತಿಯ ಎಷ್ಟು ಮಕ್ಕಳು ಹಾಜರಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿಲ್ಲ.

ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆ ಮಕ್ಕಳಿಗೆ ವಿವಿಧ ರೀತಿ ಸ್ವಾಗತ ಕೋರಲಾಯಿತು. ಬಹುತೇಕ ಶಾಲೆಗಳಲ್ಲಿ ಆರತಿ ಮಾಡಿ ಸ್ವಾಗತಿಸಿದರೆ, ಕೆಲವೆಡೆ ಸಿಹಿ ನೀಡಿ ಸ್ವಾಗತಿಸಲಾಯಿತು. ಇನ್ನಷ್ಟು ಅದ್ದೂರಿತನಗಳನ್ನು ಪ್ರದರ್ಶನ ಮಾಡಿರುವ ಕೆಲವು ಶಾಲೆಗಳು ಶಾಲೆಯ ಹಿರಿಯ ವಿದ್ಯಾರ್ಥಿಗಳಿಗೆ ವಿವಿಧ ವೇಷ ಭೂಷಣಗಳನ್ನು ಹಾಕಿಸಿ ಶಾಲಾ ಆರಂಭದ ಮೊದಲ ದಿನವನ್ನು ಅವಿಸ್ಮರಣೀಯಗೊಳಿಸಿದವು. ಹೆಚ್ಚಿನ ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ಸಾಮಗ್ರಿಗಳನ್ನು ವಿತರಿಸಿ ಶೈಕ್ಷಣಿಕ ಅಭಿವೃದ್ಧಿಗೂ ಸಹಕಾರ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net