ಶಿವಮೊಗ್ಗ ಏರ್‌ಪೋರ್ಟ್‌ಗೆ 20 ಲಕ್ಷ ರೂ. ದಂಡ

Airport
ಶಿವಮೊಗ್ಗ ಹೊರವಲಯದಲ್ಲಿರುವ ಏರ್‌ಪೋರ್ಟ್
Published on

ಶಿವಮೊಗ್ಗ: ಏರ್‌ಪೋರ್ಟ್‌ನಲ್ಲಿ ವಿಮಾನಗಳ ಕಾರ್ಯಾಚರಣೆಗೆ ಒಂದು ತಿಂಗಳು ಪರವಾನಗಿ ವಿಸ್ತರಣೆಯಾಗಿರುವ ನಡುವೆಯೇ ಡಿಜಿಸಿಎ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 20 ಲಕ್ಷ ರೂ. ದಂಡ ವಿಧಿಸಿದೆ.

ವಿಮಾನ ನಿಲ್ದಾಣಕ್ಕೆ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸದ ಹಿನ್ನೆಲೆಯಲ್ಲಿ ದಂಡದ ಶಿಕ್ಷೆ ಬಿದ್ದಿದೆ. ಏರ್‌ಪೋರ್ಟ್‌ನ ನಿರ್ವಹಣಾ ಉಸ್ತುವಾರಿ ವಹಿಸಿಕೊಂಡಿರುವ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಈಗ ದಂಡ ಪಾವತಿಸಬೇಕಿದೆ.
ಜೂನ್‌ನಲ್ಲಿ ಡಿಜಿಸಿಎ ಸಿಬ್ಬಂದಿ ಪರಿಶೀಲನೆಗೆ ಆಗಮಿಸಿದ್ದ ಸಂದರ್ಭದಲ್ಲಿ ಏರ್‌ಪೋರ್ಟ್ ನಿರ್ವಹಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ನೋಟಿಸ್ ಜಾರಿ ಮಾಡಿದ್ದರು. ಕೆಎಸ್‌ಐಐಡಿಸಿ ಡಿಜಿಸಿಎಗೆ ಉತ್ತರ ನೀಡಿತ್ತು. ಆ ಉತ್ತರಕ್ಕೆ ತೃಪ್ತರಾಗದ ಡಿಜಿಸಿಎ ಅಧಿಕಾರಿಗಳು ಏರ್‌ಪೋರ್ಟ್‌ನಲ್ಲಿ ಅಸುರಕ್ಷಿತ ಸನ್ನಿವೇಶ ಸೃಷ್ಟಿಯಾಗಿತ್ತು. ಅಂತಹ ಸನ್ನಿವೇಶದಲ್ಲಿ ವಿಮಾನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದು ತಪ್ಪು ಎಂದು ದಂಡ ವಿಧಿಸಿದೆ.
ಈ ಕುರಿತು ಏರ್‌ಪೋರ್ಟ್ ಅಧಿಕಾರಿಗಳನ್ನು ವಿಜಯವಾಣಿ ಸಂಪರ್ಕಿಸಿದ ಸಂದರ್ಭದಲ್ಲಿ ದಂಡ ವಿಧಿಸಲು ಕಾರಣವಾಗಿರುವ ಅಂಶಗಳನ್ನು ಅಧಿಕಾರಿಗಳು ತಿಳಿಸಿದ್ದಾರೆ. ಏರ್‌ಪೋರ್ಟ್‌ನಲ್ಲಿ ಅಗ್ನಿಶಾಮಕ ಘಟಕದ ಬಹುತೇಕ ಸಿಬ್ಬಂದಿಯನ್ನು ವರ್ಗಾಯಿಸಲಾಗಿತ್ತು. ಆ ಸಂದರ್ಭದಲ್ಲೇ ಡಿಜಿಸಿಎ ಅಧಿಕಾರಿಗಳು ಇಲ್ಲಿಗೆ ಬಂದು ಪರಿಶೀಲಿಸಿದ್ದರು. ಅಗತ್ಯ ಸಿಬ್ಬಂದಿ ಇಲ್ಲ. ಹೀಗಾಗಿ ನಿರ್ವಹಣೆಗೆ ಸಮಸ್ಯೆಯಾಗಬಹುದೆಂಬ ಕಾರಣಕ್ಕೆ ದಂಡ ವಿಧಿಸಿದ್ದಾರೆ. ದಂಡ ವಿಧಿಸಿರುವುದನ್ನು ಮರುಪರಿಶೀಲಿಸುವಂತೆ ಮನವಿ ಸಲ್ಲಿಸಲು ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net