2 ಲಕ್ಷ ಕ್ವಿಂಟಾಲ್ ರಾಗಿ ಖರೀದಿ

9 kdr ragi
ಕಡೂರು ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರವನ್ನು ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಆಸಂದಿ ಕಲ್ಲೇಶ್ ಉದ್ಘಾಟಿಸಿದರು. ಜಿ.ರೇವಣ್ಣ, ದೇವರಾಜ್, ಪ್ರಶಾಂತ್, ಏಳುಕೋಟಿ ಮತ್ತು ಧರ್ಮರಾಜ್ ಇತರರಿದ್ದರು.
Published on

ಕಡೂರು: ರಾಜ್ಯ ಸರ್ಕಾರ ರೈತರ ಪರ ಕೆಲಸ ಮಾಡುತ್ತಿದೆ. ರಾಗಿ ಖರೀದಿ ಕೇಂದ್ರ ಆರಂಭಿಸಿ ಸುಮಾರು 2 ಲಕ್ಷ ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆಗೆ ಖರೀದಿಸಲಾಗುತ್ತಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್ ತಿಳಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾನುವಾರ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯಿಂದ 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಬಯಲುಸೀಮೆ ತಾಲೂಕಿನಲ್ಲಿ ಹೆಚ್ಚು ಬೆಳೆಯುವ ರಾಗಿ ಬೆಳೆಗೆ ಶಾಸಕರು ಸಂಬಂಧಿಸಿದ ಇಲಾಖೆಗಳ ಮೂಲಕ ಚರ್ಚಿಸಿ ರಾಗಿ ಖರೀದಿ ಕೇಂದ್ರ ಸ್ಥಾಪಿಸಿದ್ದಾರೆ. ಕೊಬ್ಬರಿ, ರಾಗಿ, ಕಡ್ಲೆಯನ್ನು ಬೆಂಬಲ ಬೆಲೆ ಮೂಲಕ ಖರೀದಿಸುತ್ತಿದ್ದು, ರೈತರು ಯಾವುದೇ ಗೊಂದಲ ಮಾಡಿಕೊಳ್ಳದೆ ಇಲಾಖೆಯ ಅಧಿಕಾರಿಗಳ ಮಾರ್ಗಸೂಚಿಯಂತೆ ನಿಗದಿತ ದಿನದಂದು ರಾಗಿ ತಂದು ನೀಡಬೇಕಿದೆ ಎಂದು ಮನವಿ ಮಾಡಿದರು.

ಕಡೂರು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಜಿ.ಏಳುಕೋಟಿ ಮಾತನಾಡಿ, ಬೆಂಬಲ ಬೆಲೆ ಯೋಜನೆಯಡಿ ತಾಲೂಕಿನಲ್ಲಿ 5 ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರು ನೋಂದಣಿ ಸಮಯದಲ್ಲಿ ಬಯೋಮೆಟ್ರಿಕ್ ನೀಡಬೇಕು. ನಂತರ ರಾಗಿಯನ್ನು ಕೇಂದ್ರಕ್ಕೆ ನೀಡುವಾಗ ಮತ್ತೊಮ್ಮೆ ಬಯೋಮೆಟ್ರಿಕ್ ನೀಡಬೇಕೆಂಬ ನಿಯಮ ಮಾಡಿದ್ದು, ಎಲ್ಲಿಯೂ ಗೊಂದಲವಿಲ್ಲದೆ ರಾಗಿ ಖರೀದಿಗೆ ಎಲ್ಲ ವ್ಯವಸ್ಥೆ ಮಾಡಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದರು.

ಎಪಿಎಂಸಿ ಸಹಾಯಕ ಕಾರ್ಯದರ್ಶಿ ಧರ್ಮರಾಜ್ ಮಾತನಾಡಿ, ಎರಡು ಬಾರಿ ಬಯೋಮೆಟ್ರಿಕ್ ನೀಡುವುದರ ಮೂಲಕ ಸ್ವಚ್ಛಗೊಳಿಸಿದ ರಾಗಿಯನ್ನೇ ನೀಡಬೇಕಿದೆ. ದಿನಕ್ಕೆ 30 ಫಲಾನುಭವಿಗಳಿಗೆ ಮಾತ್ರ ರಾಗಿ ನೀಡಲು ಅವಕಾಶ ಇದ್ದು ಜೇಷ್ಠತಾ ಪಟ್ಟಿಯಂತೆ ಖರೀದಿಸುತ್ತಾರೆ ಎಂದು ತಿಳಿಸಿದರು.

ಸಹಕಾರ ಮಹಾ ಮಂಡಳದ ಶಾಖಾ ವ್ಯವಸ್ಥಾಪಕ ಪ್ರಶಾಂತ್ ಮಾತನಾಡಿ, ರಾಗಿ ಖರೀದಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ರೈತರು ಗೊಂದಲಗಳಿಲ್ಲದೆ ರಾಗಿ ಮಾರಾಟ ಮಾಡಿ ಎಂದು ಮನವಿ ಮಾಡಿದರು.ನಿವೃತ್ತ ಪ್ರಾಧ್ಯಾಪಕ ಜಿ.ರೇವಣ್ಣ, ರೈತ ಹೋಚಿಹಳ್ಳಿ ದೇವರಾಜ್, ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net