ಮೋದಿ ಸರ್ಕಾರಕ್ಕೆ ಎರಡು ವರ್ಷ: ಇಂದು ಬಿಜೆಪಿ ಸಾಮಾಜಿಕ ಸೇವೆ

modi
Published on

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 2 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ನಾಡಿನ 29 ಸಾವಿರ ಹಳ್ಳಿಗಳಲ್ಲಿ ಸೇವೆ ಮತ್ತು ಸಾಮಾಜಿಕ ಕೆಲಸಗಳನ್ನು ಪಕ್ಷ ಹಮ್ಮಿಕೊಂಡಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.

ಕೋವಿಡ್ ಸಂಬಂಧಿತ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಬಗ್ಗೆ ಈಗಾಗಲೆ ಬೂತ್ ಮಟ್ಟದ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅಕ್ಕಿ ಕೊಡುವುದು, ಪಡಿತರ ವಿತರಣೆ, ವಿದ್ಯಾರ್ಥಿಗಳ ಶುಲ್ಕ ಕಟ್ಟುವುದು ಸೇರಿ ನಾನಾ ರೀತಿಯ ಸೇವೆಯಲ್ಲಿ 25 ಲಕ್ಷ ಕಾರ್ಯಕರ್ತರು ತೊಡಗಿಸಿಕೊಳ್ಳಲಿದ್ದಾರೆ ಎಂದರು.

ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಭಾರತ ಎಂದರೆ ಕೇವಲ ಸಾಲ ಕೇಳುವ ದೇಶ ಎನ್ನುವ ಭಾವನೆ ಮನೆ ಮಾಡಿತ್ತು. ಇಂದು ಭಾರತ ಎಲ್ಲ ದೇಶಗಳ ನಡುವೆ ತಲೆ ಎತ್ತಿ ನಿಲ್ಲುವ ಘನತೆ, ಗೌರವವನ್ನು ಸಂಪಾದನೆ ಮಾಡಿಕೊಂಡಿದೆ. ಇದಕ್ಕೆ ಮೋದಿ ಅವರು ಅಭಿವೃದ್ಧಿ ಪಥದಲ್ಲಿ ದೇಶವನ್ನು ಕೊಂಡೊಯ್ಯುತ್ತಿರುವುದೇ ಸಾಕ್ಷಿ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 70 ಕೋಟಿ ರೂ. ಸಾಲ ಮನ್ನಾ ಮಾಡಿದ್ದೇವೆಂದು ಬೆನ್ನು ತಟ್ಟಿಕೊಂಡಿದ್ದರು. ಆದರೆ, ಈಗ ಬಿಜೆಪಿ ಸರ್ಕಾರ ರೈತರಿಗಾಗಿಯೇ 75 ಸಾವಿರ ಕೋಟಿ ರೂ. ಅನ್ನು ಬಜೆಟ್​ನಲ್ಲಿ ನೀಡುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ 6 ಸಾವಿರ ರೂ. ನೀಡಿದರೆ, ರಾಜ್ಯ ಸರ್ಕಾರ 4 ಸಾವಿರ ರೂ. ಕೊಡುತ್ತಿದೆ. ರೈತರಿಗೆ ಪ್ರತಿ ವರ್ಷ 10 ಸಾವಿರ ರೂ. ನೇರ ಖಾತೆಗೆ ಜಮೆಯಾಗುತ್ತಿದೆ ಎಂದು ಹೇಳಿದರು.

80 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯ ಕಿಟ್ ನೀಡಲಾಗುತ್ತಿದೆ. 20 ಕೋಟಿ ಬಡ ಮಹಿಳೆಯರಿಗೆ ತಲಾ 500 ರೂ. ನೆರವು ನೀಡಿದೆ. 26 ಸಾವಿರ ವೆಂಟಿಲೇಟರ್ ಸಾಮರ್ಥ್ಯವನ್ನು 80 ಸಾವಿರಕ್ಕೆ ಹೆಚ್ಚಿಸಿದ್ದು, ರಾಜ್ಯದಲ್ಲಿ 32 ಹೊಸ ಆಕ್ಸಿಜನ್ ಘಟಕ ಪ್ರಾರಂಭಿಸಲಾಗಿದೆ. ರೈತರಿಗೆ ನೆರವಾಗಲು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ರವಿಕುಮಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net