

ಹರಿದ್ವಾರ: ಕಾರಾಗೃಹದಲ್ಲಿ ನಡೆದ ರಾಮಲೀಲಾ ಕಾರ್ಯಕ್ರಮದ ವೇಳೆ ಸೀತೆಯನ್ನು ಅರಸುವ ವಾನರ ವೇಷದಲ್ಲೇ ಕೈದಿಗಳಿಬ್ಬರು ಪರಾರಿ ಆಗಿದ್ದಾರೆ. ಉತ್ತರಾಖಂಡದ ಹರಿದ್ವಾರದ ರೋಶ್ನಾಬಾದ್ ಜೈಲ್ನಲ್ಲಿ ಶುಕ್ರವಾರ ದಸರಾ ಪ್ರಯುಕ್ತ ಆಯೋಜಿಸಿದ್ದ ವಾರ್ಷಿಕ ರಾಮಲೀಲಾ ಕಾರ್ಯಕ್ರಮ ಸಂದರ್ಭ ಈ ಪ್ರಕರಣ ನಡೆದಿದೆ. ಹರಿದ್ವಾರದ ಈ ಜೈಲ್ನಲ್ಲಿ ರಾಮಲೀಲಾ ಕಾರ್ಯಕ್ರಮ ಒಂದು ಹಳೆಯ ಸಂಪ್ರದಾಯವಾಗಿದ್ದು, ಈ ಸಲ ಅದನ್ನೇ ಪರಾರಿಯಾಗಲು ಅವಕಾಶವಾಗಿ ಕೈದಿಗಳು ಬಳಸಿಕೊಂಡಿದ್ದಾರೆ.
ರಾಮಲೀಲಾದಲ್ಲಿ ಕೈದಿಗಳಾದ ಪಂಕಜ್, ರಾಜ್ಕುಮಾರ್ ಎಂಬವರು ವಾನರ ವೇಷ ಧರಿಸಿದ್ದು, ಸೀತೆಯನ್ನು ಅರಸುವ ಪ್ರಸಂಗ ಬಂದಾಗ ಕಪಿಗಳ ವೇಷದಲ್ಲಿದ್ದ ಇವರು ಉಳಿದ ಪಾತ್ರಧಾರಿಗಳಂತೆ ಹುಡುಕಾಟಕ್ಕೆ ಮುಂದಾಗಿದ್ದರು. ಅದೇ ನೆಪದಲ್ಲಿ ಇವರಿಬ್ಬರು ಹೊರಗೆ ಹೋಗಿದ್ದನ್ನು ಯಾರೂ ಗಮನಿಸಿರಲಿಲ್ಲ. ಜೈಲಿನಲ್ಲಿ ನಿರ್ಮಾಣ ಕಾರ್ಯವೊಂದಕ್ಕೆ ಇರಿಸಲಾಗಿದ್ದ ಏಣಿ ಬಳಸಿ ಆವರಣದ ಗೋಡೆ ಏರಿ ಹಾರಿದ್ದರು.
ಪರಾರಿಯಾದ ಕೈದಿಗಳ ಪೈಕಿ ಪಂಕಜ್ ಉತ್ತರಾಖಂಡದ ರೂರ್ಕಿಯವನಾಗಿದ್ದು, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. ರಾಜ್ಕುಮಾರ್ ಉತ್ತರಪ್ರದೇಶದ ಗೊಂಡದವನಾಗಿದ್ದು, ಅಪಹರಣ ಪ್ರಕರಣದಲ್ಲಿ ಜೈಲುಪಾಲಾಗಿದ್ದ. ಇವರಿಬ್ಬರು ಪರಾರಿ ಆಗಲು ರಾಮಲೀಲಾ, ನಿರ್ಮಾಣ ಕಾಮಗಾರಿ ಹೊರತಾಗಿ ಬೇರೆ ಅಂಶಗಳು ನೆರವಾಗಿವೆಯೇ, ಭದ್ರತಾ ಲೋಪ ಸಂಭವಿಸಿದೆಯೇ ಎಂಬೆಲ್ಲ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲುಂಗಿ-ಬೆಡ್ಶೀಟ್ ಬಳಸಿ ಐವರು ಕೈದಿಗಳು ಎಸ್ಕೇಪ್: ಐವರು ವಿಚಾರಣಾಧೀನ ಕೈದಿಗಳು ಲುಂಗಿ-ಬೆಡ್ಶೀಟ್ ಬಳಸಿ ಕಾರಾಗೃಹದ 20 ಅಡಿ ಎತ್ತರದ ಗೋಡೆಯನ್ನು ಏರಿ ಪರಾರಿಯಾದ ಪ್ರಕರಣ ಅಸ್ಸಾಮ್ಲ್ಲಿ ನಡೆದಿದೆ. ಮೊರಿಗಾಂವ್ ಜಿಲ್ಲೆಯ ಜೈಲಿನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಸೈಫುದ್ದೀನ್, ಜಿಯಾರುಲ್ ಇಸ್ಲಾಂ, ನೂರ್ ಇಸ್ಲಾಂ, ಮಫಿದುಲ್ ಮತ್ತು ಅಬ್ದುಲ್ ರಶೀದ್ ಪರಾರಿಯಾದವರು. ಇವರು ಪೊಕ್ಸೊ ಪ್ರಕರಣದಲ್ಲಿ ಜೈಲುಪಾಲಾಗಿದ್ದರು.ಕೈದಿಗಳು ಮೊದಲು ತಮ್ಮನ್ನು ಕೂಡಿಟ್ಟಿದ್ದ ಕೋಣೆಯ ಕಬ್ಬಿಣದ ಗ್ರಿಲ್ ಮುರಿದು ಹೊರಬಂದಿದ್ದು, ನಂತರ ಲುಂಗಿ, ಹೊದಿಕೆ, ಬೆಡ್ಶೀಟ್ಗಳನ್ನು ಬಳಸಿಕೊಂಡು 20 ಅಡಿ ಎತ್ತರದ ಗೋಡೆ ಏರಿ ಹಾರಿದ್ದಾರೆ. ರಾತ್ರಿ 1-2 ಗಂಟೆ ಅವಧಿಯಲ್ಲಿ ಈ ಪ್ರಕರಣ ನಡೆದಿದ್ದು, ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.