

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು ಮೊದಲ ಬಾರಿಗೆ ಕೇರಳದಲ್ಲಿ. ಒಟ್ಟು ಮೂವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರೆಲ್ಲರೂ ಕೇರಳದವರೇ ಆಗಿದ್ದು ಈಗ ಗುಣಮುಖರಾಗಿದ್ದಾರೆ.
ಆದರೆ ಈಗ ಭಾರತದಲ್ಲಿ ಹೊಸದಾಗಿ ಇಬ್ಬರಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ. ಇವರಿಬ್ಬರ ಆರೋಗ್ಯವೂ ಸ್ಥಿರವಾಗಿದ್ದು, ವೈದ್ಯಕೀಯ ನಿಗಾದಲ್ಲಿ ಇಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇಬ್ಬರು ವೈರಸ್ ಪೀಡಿತರಲ್ಲಿ ಓರ್ವ ದೆಹಲಿಯವರು, ಮತ್ತೋರ್ವರು ತೆಲಂಗಾಣದವರು ಎನ್ನಲಾಗಿದೆ. ವೈರಸ್ ಸೋಂಕಿತ ದೆಹಲಿಯ ವ್ಯಕ್ತಿ ಇಟಲಿಯಿಂದ ಆಗಮಿಸಿದ್ದರು. ಹಾಗೇ ತೆಲಂಗಾಣದಲ್ಲಿ ವೈರಸ್ ಸೋಂಕಿತರಾದವರು ಇತ್ತೀಚೆಗಷ್ಟೇ ದುಬೈಗೆ ಭೇಟಿ ಕೊಟ್ಟಿದ್ದರು.
ಈ ಮೊದಲು ಕೇರಳದ ಮೂವರು ವಿದ್ಯಾರ್ಥಿಗಳಲ್ಲಿ ವೈರಸ್ ಕಾಣಿಸಿಕೊಂಡಿತ್ತು. ಅವರೆಲ್ಲ ಚೀನಾದ ವುಹಾನ್ ಪ್ರಾಂತ್ಯದಿಂದ ಒಟ್ಟಿಗೇ ಪ್ರಯಾಣಿಸಿ ಭಾರತಕ್ಕೆ ಬಂದಿದ್ದರು. ಕೇರಳದಲ್ಲಿ ಮೂವರಿಗೆ ಸೋಂಕು ಕಾಣಿಸಿಕೊಳ್ಳುತ್ತಲೇ ದೇಶಾದ್ಯಂತ ಆತಂಕ ಮೂಡಿತ್ತು. ಆದರೆ ಅವರೆಲ್ಲರಿಗೂ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ನೀಡಿ, ಸೋಂಕು ಪಸರಿಸದಂತೆ ನಿಗಾ ವಹಿಸಲಾಗಿತ್ತು. ಸದ್ಯ ಅವರೆಲ್ಲರೂ ಚೇತರಿಸಿಕೊಂಡಿದ್ದಾರೆ. (ಏಜೆನ್ಸೀಸ್)