

ಹುಣಸೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದಿಂದ ಹುಣಸೂರು ತಾಲೂಕಿನ ಸಿಂಗಮಾರನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಹಂತದಲ್ಲಿರುವ ಡೇರಿಗೆ 2 ಲಕ್ಷ ರೂ. ಅನುದಾನವನ್ನ ಕ್ಷೇತ್ರದ ಯೋಜನಾಧಿಕಾರಿ ಧನಂಜಯ್ ಭಾನುವಾರ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಹೈನುಗಾರಿಕೆ ಮೂಲಕ ರೈತರು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಯೋಜನೆ ವತಿಯಿಂದ ರಾಸುಗಳ ನಿರ್ವಹಣೆ, ರಾಸುಗಳ ಆಯ್ಕೆ ಸೇರಿದಂತೆ ಕೃಷಿ ಪಾಠಶಾಲೆಯ ಮೂಲಕ ಮಾಹಿತಿ ನೀಡಲಾಗುತ್ತಿದೆ. ಹೈನುಗಾರಿಕೆ ಅವಲಂಬಿಸಿರುವ ರೈತ ಕುಟುಂಬಗಳ ದಿನನಿತ್ಯದ ಖರ್ಚಿಗೆ ಬೇಕಾದ ಆದಾಯ ಮಾತ್ರವಲ್ಲದೇ ಗೋಮಾತೆಯ ರಕ್ಷಣೆಯೂ ಇದರಿಂದ ಆಗಲಿದೆ. ಅತ್ಯುತ್ತಮ ಸ್ಥಳೀಯ ತಳಿಗಳನ್ನು ಹೊಂದಿದ ರಾಸುಗಳ ನಿರ್ವಹಣೆಯನ್ನು ಅರಿತು ರೈತರು ಕೃಷಿಯ ಉಪಕಸುಬಿನಲ್ಲಿ ಮುಖ್ಯವಾದ ಹೈನುಗಾರಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಕೋರಿದರು.
ಸಿಂಗರಮಾರನಹಳ್ಳಿ ಡೇರಿ ಅಧ್ಯಕ್ಷೆ ಜಯಂತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್, ಡೇರಿ ಸೆಕ್ರೆಟರಿ ದಿನೇಶ್, ಗ್ರಾಪಂ ಸದಸ್ಯೆ ಭಾರತಿ, ನಿರ್ದೇಶಕ ಮಂಜೇಗೌಡ, ಕೆಂಡಗಣ್ಣೇಗೌಡ, ಯೋಜನೆಯ ವಲಯ ಮೇಲ್ವಿಚಾರಕಿ ನಜ್ಮ, ಸೇವಾ ಪ್ರತಿನಿಧಿ ವಿನುತಾ, ಕೃಷಿ ಮೇಲ್ವಿಚಾರಕ ಶಿವಶಂಕರ್ ಮತ್ತಿತರರಿದ್ದರು.