

ನಂಜನಗೂಡು: ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಿಕೊಂಡು ಬಂದವರ ಗಮನ ಬೇರೆಡೆ ಸೆಳೆದ ಖದೀಮರು ಎರಡು ಲಕ್ಷ ರೂ.ಅಪಹರಿಸಿದ್ದಾರೆ.
ನಗರದ ರಾಷ್ಟ್ರಪತಿ ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಶುಕ್ರವಾರ ತಾಲೂಕಿನ ಚಿಲಕಹಳ್ಳಿ ಗ್ರಾಮದ ಜಿ.ಶಿವಯ್ಯ ಹಣ ಡ್ರಾ ಮಾಡಿ ಹೊರಗೆ ಬಂದು ಬೈಕ್‌ನಲ್ಲಿ ತೆರಳಲು ಮುಂದಾದಾಗ ಅಲ್ಲಿಗೆ ಬಂದ ಆಗಂತುಕರು ರಸ್ತೆಯಲ್ಲಿ ಹಣವಿಟ್ಟು ನಿಮ್ಮ ಹಣ ಕೆಳಗೆ ಬಿದ್ದಿದೆ ನೋಡಿ ಎಂದು ಗಮನವನ್ನು ರಸ್ತೆ ಕಡೆಗೆ ಹರಿಸಿದ್ದಾರೆ. ಶಿವಯ್ಯ ಅತ್ತ ನೋಡುತ್ತಿದ್ದಂತೆ ಬೈಕ್ ಟ್ಯಾಂಕ್ ಮೇಲೆ ಇಟ್ಟಿದ್ದ ಹಣದ ಬ್ಯಾಗ್ ಕಸಿದು ಕ್ಷಣಮಾತ್ರದಲ್ಲಿ ಪರಾರಿಯಾಗಿದ್ದಾರೆ. ಘಟನೆ ಬಳಿಕ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.