ಬ್ರಿಜ್ ಭೂಷಣ್ ಪುತ್ರನ ಬೆಂಗಾವಲು ವಾಹನ ಬೈಕ್​ಗೆ ಡಿಕ್ಕಿ; ಇಬ್ಬರು ಅಪ್ರಾಪ್ತರು ಸಾವು

Road Accident
Published on

ಲಖನೌ: ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರ ಪುತ್ರ ಕರಣ್ ಭೂಷಣ್ ಸಿಂಗ್ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಅಪ್ರಾಪ್ತರು ಮೃತಪಟ್ಟಿದ್ದು, ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗೊಂಡಾದಲ್ಲಿ ಬುಧವಾರ ನಡೆದಿದೆ. ಗೊಂಡಾದ ಕರ್ನಲ್‌ಗಂಜ್-ಹುಜೂರ್‌ಪುರ ರಸ್ತೆಯಲ್ಲಿರುವ ಬೈಕುಂತ್ ಪದವಿ ಕಾಲೇಜು ಬಳಿ ಫಾರ್ಚೂನರ್ ಬೈಕ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ದೂರುದಾರರಾದ ಚಂದಾ ಬೇಗಂ ಅವರ ತಮ್ಮ ಮಗ ರೆಹಾನ್ (17) ಮತ್ತು ಸೋದರಳಿಯ ಶಹಜಾದೆ (24) ಬೈಕ್‌ನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಎಸ್‌ಯುವಿ ಇಬ್ಬರಿಗೆ ಡಿಕ್ಕಿ ಹೊಡೆದಿದೆ ಎಂದು ಎಫ್​ಐಆರ್​ನಲ್ಲಿ ದಾಖಲಿಸಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಮತ್ತು ಸಂತ್ರಸ್ತರ ಕುಟುಂಬದವರು ಅಪಘಾತಕ್ಕೆ ಕಾರಣರಾದವರನ್ನು ಬಂಧಿಸುವಂತೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಹಿರಿಯ ಪೊಲೀಸ್​ ಅಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ, ಶೀಘ್ರ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಪಘಾತಕ್ಕೆ ಕಾರಣವಾದ ಕಾರು ಕರಣ್ ಭೂಷಣ್ ಸಿಂಗ್ ಬೆಂಗಾವಲು ಪಡೆಗೆ ಸೇರಿದೆ. ಅಪಘಾತದ ಸಮಯದಲ್ಲಿ ಕರಣ್ ಭೂಷಣ್ ಕಾರಿನಲ್ಲಿದ್ದರೆ ಎಂಬ ಕುರಿತು ಸದ್ಯ ತನಿಖೆ ನಡೆಯುತ್ತಿದೆ ಎಂದು ಪೊಲೀಸ್​ ಮೂಲಗಳ ತಿಳಿಸಿವೆ. ಅಪಘಾತದಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ 60 ವರ್ಷದ ಸೀತಾ ದೇವಿ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಸಂಬಂಧಿಕರು ದಾಖಲಿಸಿದ ದೂರಿನ ಆಧಾರದ ಮೇಲೆ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕಾರನ್ನು ಬಿಟ್ಟು ಮತ್ತೊಂದು ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ಚಾಲಕನನ್ನು ಸಹ ಬಂಧಿಸಲಾಗಿದೆ ಎಂದು ಎಸ್‌ಎಚ್‌ಒ ಹೇಳಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net