

Firing on Assam Rifles Convoy: ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಬಂದೂಕುಧಾರಿಗಳು ಭದ್ರತಾ ಬೆಂಗಾವಲು ಪಡೆಯ ಮೇಲೆ ಹೊಂಚು ಹಾಕಿ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಅಸ್ಸಾಂ ರೈಫಲ್ಸ್ ಯೋಧರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂ ರೈಫಲ್ಸ್ ಸಿಬ್ಬಂದಿಯನ್ನು ಹೊತ್ತ ವಾಹನವು ಇಂಫಾಲದಿಂದ ಬಿಷ್ಣುಪುರದ ಕಡೆಗೆ ಚಲಿಸುತ್ತಿದ್ದಾಗ ಸಂಜೆ 5.50 ರ ಸುಮಾರಿಗೆ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:ಬೈಕ್ ನಂಬರ್ ಪ್ಲೇಟ್ ಮೇಲೆ ಕಪ್ಪು ಸ್ಟಿಕ್ಕರ್
ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಈ ದಾಳಿಯನ್ನು ಘೋರ ಹಿಂಸಾಚಾರ ಎಂದು ಕರೆದಿದ್ದು. ರಾಜ್ ಭವನ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅಸ್ಸಾಂ ರೈಫಲ್ಸ್ ಯೋಧರ ಅಗಲಿಕೆಗೆ ರಾಜ್ಯಪಾಲರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಎಂತಹ ಪರಿಸ್ಥಿತಿಯಲ್ಲೂ ಇಂತಹ ಘೋರ ಹಿಂಸಾಚಾರವನ್ನು ಸಹಿಸುವುದಿಲ್ಲ, ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಬಲವಾದ ಸಂಕಲ್ಪದೊಂದಿಗೆ ಇಂತಹ ಕೃತ್ಯಗಳನ್ನು ಎದುರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಕೂಡ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ನಂಬೋಲ್ ಸಬಲ್ ಲೈಕೈನಲ್ಲಿ ನಮ್ಮ 33 ಅಸ್ಸಾಂ ರೈಫಲ್ಸ್ ಸಿಬ್ಬಂದಿಯ ಮೇಲೆ ನಡೆದ ಹೊಂಚುದಾಳಿಯ ಬಗ್ಗೆ ಕೇಳಿ ನನಗೆ ತುಂಬಾ ಆಘಾತವಾಗಿದೆ. ಇಬ್ಬರು ಸೈನಿಕರ ನಷ್ಟ ಮತ್ತು ಇತರ ಹಲವಾರು ಜನರಿಗೆ ಗಾಯಗಳು ನಮ್ಮೆಲ್ಲರಿಗೂ ಕ್ರೂರ ಹೊಡೆತವಾಗಿದೆ, ಮೃತರ ಕುಟುಂಬಗಳಿಗೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸೈನಿಕರ ಧೈರ್ಯ ಮತ್ತು ತ್ಯಾಗ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಈ ಘೋರ ಕೃತ್ಯದ ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
ಕಳೆದ ವರ್ಷದಿಂದ ಹಲವಾರು ಜಿಲ್ಲೆಗಳಲ್ಲಿ ಪದೇ ಪದೇ ಹಿಂಸಾಚಾರ ಮತ್ತು ಅಶಾಂತಿ ಉಂಟಾಗಿರುವುದರಿಂದ ಮಣಿಪುರದಲ್ಲಿ ಭದ್ರತೆಯನ್ನು ಹೆಚ್ಚಿಸಿರುವ ನಡುವೆಯೇ ಈ ದಾಳಿ ನಡೆದಿದೆ.(ಏಜೆನ್ಸೀಸ್)