

ಶಿವಮೊಗ್ಗ: ಮಲೆನಾಡು ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರಲ್ಲೂ ತುಂಗಾ ಮತ್ತು ಲಿಂಗನಮಕ್ಕಿ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯಕ್ಕೆ 24 ಗಂಟೆಯಲ್ಲೇ ಎರಡು ಅಡಿಯಷ್ಟು ನೀರು ಹರಿದುಬಂದಿದೆ. ಮತ್ತೊಂದೆಡೆ ತುಂಗಾ ಜಲಾಶಯ ಭರ್ತಿಯಾಗಿದ್ದು ಎರಡು ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ.
1,819 ಅಡಿ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯವು ಪ್ರಸ್ತುತ 1,747.95 ಅಡಿಗೆ ಏರಿಕೆಯಾಗಿದೆ. ಗುರುವಾರ ಬೆಳಗ್ಗೆವರೆಗೆ 19,684 ಕ್ಯೂಸೆಕ್ ನೀರಿನ ಒಳಹರಿವಿದ್ದು 1,575.85 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆಗೆ ಹರಿಬಿಡಲಾಗುತ್ತಿದೆ. ಬುಧವಾರ ಬೆಳಗ್ಗೆಯಷ್ಟೇ 1,745.60 ಅಡಿಯಷ್ಟಿದ್ದ ಜಲಾಶಯಕ್ಕೆ ಒಂದೇ ದಿನದಲ್ಲಿ ಭರ್ಜರಿ ನೀರು ಹರಿದುಬಂದಿದೆ. ಈ ಭಾಗದಲ್ಲಿ ಮಳೆ ಹೆಚ್ಚಾಗಿರುವ ಕಾರಣಕ್ಕೆ ವಿಶ್ವವಿಖ್ಯಾತ ಜೋಗಜಲಪಾತವು ತನ್ನ ವೈಭವವನ್ನು ಮರಳಿ ಪಡೆಯುತ್ತಿದ್ದು ಪ್ರವಾಸಿಗರನ್ನು ಸೆಳೆಯುತ್ತಿದೆ.
ಇತ್ತ ಕಡಿಮೆ ಜಲ ಸಂಗ್ರಹಣೆ ಸಾಮರ್ಥ್ಯದ ತುಂಗಾ ಜಲಾಶಯವು ನೈರುತ್ಯ ಮಾನ್ಸೂನ್ ಮೊದಲ ಮಳೆಗೆ ಗರಿಷ್ಠ ಮಟ್ಟ ತಲುಪಿದ್ದು ಗುರುವಾರದಿಂದಲೇ ಜಲಾಶಯದ ಎರಡು ಕ್ರಸ್ಟ್ ಗೇಟ್‌ಗಳ ಮೂಲಕ ತುಂಗಾನದಿಗೆ ನೀರು ಹರಿಸಲಾಗುತ್ತಿದೆ. ಕಳೆದೆರೆಡು ಮೂರು ದಿನಗಳಿಂದ ಜಲಾನಯನ ಪ್ರದೇಶವಾದ ತೀರ್ಥಹಳ್ಳಿ, ಆಗುಂಬೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದ ಡ್ಯಾಂನ ಒಳಹರಿವಿನಲ್ಲಿ ನಿರಂತರವಾಗಿ ಏರಿಕೆ ಕಂಡುಬರಲಾರಂಭಿಸಿದೆ.
ಜಲಾಶಯದ ನೀರು ಸಂಗ್ರಹಣೆ ಸಾಮರ್ಥ್ಯ 588.24 ಮೀ.(3.24 ಟಿಎಂಸಿ) ಗರಿಷ್ಠ ಮಟ್ಟವಾಗಿದೆ. ಈಗಾಗಲೇ 588.02 ಮೀ.ಗೆ ತಲುಪಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರು ಹರಿಸಲಾಗುತ್ತಿದೆ. ಪ್ರಸ್ತುತ ಡ್ಯಾಂಗೆ 6 ಸಾವಿರ ಕ್ಯೂಸೆಕ್ ಒಳಹರಿವಿದ್ದು ಅದರಲ್ಲಿ ಕ್ರಸ್ಟ್‌ಗೇಟ್ ಮೂಲಕ 1 ಸಾವಿರ ಹಾಗೂ ಪವರ್ ಹೌಸ್ ಮೂಲಕ 5 ಸಾವಿರ ಕ್ಯೂಸೆಕ್ ನೀರು ಹೊರ ಹರಿಸಲಾಗುತ್ತಿದೆ. ಇಡೀ ರಾಜ್ಯದಲ್ಲೇ ಪ್ರತಿ ವರ್ಷವೂ ಮೊದಲು ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆಯನ್ನು ತುಂಗಾ ಡ್ಯಾಂ ಹೊಂದಿದೆ.
ಭದ್ರಾ ಡ್ಯಾಂಗೂ ಒಳಹರಿವು ಏರಿಕೆ: ತುಂಗಾ ಮತ್ತು ಲಿಂಗನಮಕ್ಕಿ ಜಲಾಶಯಕ್ಕೆ ಹೋಲಿಸಿದರೆ ಭದ್ರಾ ಡ್ಯಾಂಗೆ ನೀರಿನ ಒಳಹರಿವು ಕಡಿಮೆ ಇದೆ. ಆದರೆ ಭದ್ರಾ ಜಲನಯನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು 186 ಅಡಿ ಸಾಮರ್ಥ್ಯದ ಜಲಾಶಯವು ಗುರುವಾರ ಬೆಳಗ್ಗೆವರೆಗೆ 120.8 ಅಡಿಗೆ ಏರಿಕೆಯಾಗಿದೆ. ನೀರಿನ ಒಳಹರಿವು 4,082 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಜಲಾಶಯದಿಂದ 344 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.