ITI ಸಂಸ್ಥೆಯ ಹೆಣ್ಣುಮಕ್ಕಳಿಗೆ ತಿಂಗಳಲ್ಲಿ 2 ದಿನ ಮುಟ್ಟಿನ ರಜೆ ಘೋಷಿಸಿದ ಕೇರಳ ಸರ್ಕಾರ

ವಿಜಯವಾಣಿ - 2024-11-28T201358.490
Published on

ತಿರುವನಂತಪುರಂ: ಕೇರಳದಾದ್ಯಂತ ಇರುವ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ITI ) ಪ್ರಶಿಕ್ಷಣಾರ್ಥಿಗಳಿಗೆ ತಿಂಗಳಲ್ಲಿ ಎರಡು ದಿನಗಳ ಮುಟ್ಟಿನ ರಜೆ ಮತ್ತು ವಾರದ ಪ್ರತಿ ಶನಿವಾರದಂದು ರಜೆಯನ್ನು ನೀಡಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಘೋಷಿಸಿದ್ದಾರೆ. ಈ ಹಿಂದೆ ಶನಿವಾರವನ್ನು ಕೆಲಸದ ದಿನಗಳು ಎಂದು ಪರಿಗಣಿಸಲಾಗಿತ್ತು. ಇದನ್ನು ಬದಲಾಯಿಸಿದ ಸಚಿವರು, ಇನ್ಮುಂದೆ ಶನಿವಾರ ಕೂಡ ರಜೆ ದಿನವಾಗಲಿದೆ ಎಂದಿದ್ದಾರೆ. ಐಟಿಐಗಳಲ್ಲಿ ತರಬೇತಿ ಪಡೆಯುವ ಮಹಿಳೆಯರು ಈಗ ಪ್ರತಿ ತಿಂಗಳು ಎರಡು ದಿನಗಳ ಋತುಚಕ್ರದ ರಜೆಗೆ ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದಾರೆ.

ಶನಿವಾರದ ರಜೆಯಿಂದಾಗಿ ಕಳೆದುಹೋದ ತರಬೇತಿ ಸಮಯವನ್ನು ಸರಿದೂಗಿಸಲು, ಐಟಿಐ ಶಿಫ್ಟ್‌ಗಳನ್ನು ಮರುಹೊಂದಿಸಲಿದೆ. ಮೊದಲ ಶಿಫ್ಟ್​ ಬೆಳಗ್ಗೆ 7:30ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ಮತ್ತು ಎರಡನೇ ಪಾಳಿ ಬೆಳಗ್ಗೆ 10:00ರಿಂದ ಸಂಜೆ 5:30 ರವರೆಗೆ ನಡೆಯಲಿದೆ. ಇಂದು ಮಹಿಳೆಯರು ಹೆಚ್ಚಿನ ಕೌಶಲ್ಯ ಮತ್ತು ದೈಹಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಸಚಿವ ಶಿವನ್‌ಕುಟ್ಟಿ ಒತ್ತಿ ಹೇಳಿದ್ದಾರೆ.

ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ಐಟಿಐಗಳಲ್ಲಿ ಮಹಿಳಾ ಪ್ರಶಿಕ್ಷಣಾರ್ಥಿಗಳಿಗೆ ಎರಡು ದಿನಗಳ ಋತುಚಕ್ರದ ರಜೆ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಅದರ ಅನ್ವಯ ಮಹಿಳಾ ಟ್ರೈನಿಗಳಿಗೆ ತಿಂಗಳಲ್ಲಿ ಎರಡು ದಿನಗಳು ಮತ್ತು ವಾರದ ಶನಿವಾರದಂದು ರಜೆಯನ್ನು ಘೋಷಿಸಿದ್ದೇವೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net