

ಬೆಂಗಳೂರು : ಬಿನ್ನಿಮಿಲ್ ಎಪಿಎಂಸಿ ಬಳಿ ೨ ಕೋಟಿ ರೂ. ಜಪ್ತಿ ಮಾಡಿರುವ ಸಂಬಂಧ ಬಿಜೆಪಿ ರಾಜ್ಯ ಘಟಕದ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು ಸೇರಿ ಮೂವರ ವಿರುದ್ಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಿಸಲಾಗಿದೆ.
ಕಾರಿನಲ್ಲಿ ೨ ಕೋಟಿ ರೂ. ಸಾಗಿಸುತ್ತಿರುವ ಬಗ್ಗೆ ಚುನಾವಣಾ ಅಕ್ರಮ ತಡೆ ತಂಡಕ್ಕೆ ಮಾಹಿತಿ ಬಂದಿತ್ತು. ಈ ಸುಳಿವು ಆಧರಿಸಿ ಅಧಿಕಾರಿಗಳು, ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಕಾರೊಂದನ್ನು ತಡೆದು ತಪಾಸಣೆ ಮಾಡಿದಾಗ ೨ ಕೋಟಿ ರೂ. ಪತ್ತೆಯಾಗಿತ್ತು. ಕಾರಿನಲ್ಲಿದ್ದವರು ಆ ಹಣವು ಬಿಜೆಪಿ ರಾಜ್ಯ ಘಟಕದ ಕಚೇರಿಗೆ ಸೇರಿದ್ದು ಎಂದು ದಾಖಲೆ ಒದಗಿಸಿದ್ದರು. ಬಳಿಕ ಅಧಿಕಾರಿಗಳು ಆ ಹಣವನ್ನು ಜಪ್ತಿ ಮಾಡಿ ಆದಾಯ ತೆರಿಗೆ (ಐಟಿ) ಇಲಾಖೆಗೆ ವಶಕ್ಕೆ ನೀಡಿ, ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರು.
ಆ ಹಣವನ್ನು ಬ್ಯಾಂಕ್‌ನಿಂದ ನಗದೀಕರಿಸಿರುವುದಕ್ಕೆ ಸಂಬಂಧಪಟ್ಟ ದಾಖಲೆಗಳಿದ್ದ ಕಾರಣಕ್ಕೆ ಆದಾಯ ತೆರಿಗೆ ಕಾಯಿದೆಯ ಉಲ್ಲಂಘನೆ ಆಗಿಲ್ಲ ಎಂದು ಐಟಿ ಅಧಿಕಾರಿಗಳು ಚುನಾವಣಾಧಿಕಾರಿಗಳಿಗೆ ತಿಳಿಸಿದ್ದರು. ನಂತರ ನಗದನ್ನೂ ವಾಪಸ್ ಚುನಾವಣಾಧಿಕಾರಿಗಳಿಗೆ ಮರಳಿಸಿದ್ದರು. ಬಳಿಕ ಚುನಾವಣಾಧಿಕಾರಿಗಳು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಗಳನ್ನು ಉಲ್ಲಂಸಿ ಹಣ ಸಾಗಿಸುತ್ತಿದ್ದ ಆರೋಪದ ಮೇಲೆ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಬಿಜೆಪಿ ಕಾರ್ಯಾಲಯದ ಪತ್ರ?
ಹಣವನ್ನು ಬ್ಯಾಂಕ್‌ನಿಂದ ಚೆಕ್ ಮೂಲಕ ಡ್ರಾ ಮಾಡಿ, ಪಕ್ಷದ ಕಾರ್ಯಕರ್ತರಿಗೆ ಕೊಡಲು ಕಳುಹಿಸಲಾಗುತ್ತಿದೆ ಎಂದು ಉಲ್ಲೇಖಿಸಿದ್ದ ಬಿಜೆಪಿ ರಾಜ್ಯ ಘಟಕದ ಕಾರ್ಯಾಲಯದ ಪತ್ರವು ಕಾರಿನಲ್ಲಿತ್ತು. ಈ ಬಗ್ಗೆ ಐಟಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದು, ಆದಾಯ ತೆರಿಗೆ ವಂಚನೆ ಆಗಿಲ್ಲ ಎಂಬುದು ದೃಢಪಟ್ಟಿದೆ ಎನ್ನಲಾಗಿದೆ.
ಕೇಂದ್ರ ಚುನಾವಣಾ ಆಯೋಗದ ನಿಯಮಾವಳಿ ಪ್ರಕಾರ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು ಅಥವಾ ಅಭ್ಯರ್ಥಿಗಳ ಏಜೆಂಟರ ವೆಚ್ಚಕ್ಕೆ ೧೦ ಸಾವಿರ ರೂ.ಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ನೀಡುವಂತಿಲ್ಲ. ೧೦ ಸಾವಿರ ರೂ. ಮಿತಿಗಿಂತ ಹೆಚ್ಚಿನ ಮೊತ್ತವನ್ನು ಕಡ್ಡಾಯವಾಗಿ ಚೆಕ್ ಅಥವಾ ಆನ್‌ಲೈನ್ ಮೂಲಕ ಪಾವತಿಸಬೇಕು. ಕಾಟನ್‌ಪೇಟೆಯ ಪ್ರಕರಣದಲ್ಲಿ ಬಿಜೆಪಿಯು ಆಯೋಗದ ನಿಯಮ ಉಲ್ಲಂಸಿದೆ. ಅಲ್ಲದೆ, ಹಣ ಪಡೆಯುವವರ ಪಟ್ಟಿಯನ್ನೂ ಒದಗಿಸಿಲ್ಲ. ನಗದನ್ನು ಚುನಾವಣಾ ಅಕ್ರಮಕ್ಕೆ ಬಳಸುವ ಶಂಕೆಯ ಮೇಲೆ ಪ್ರಜಾಪ್ರತಿನಿಧಿ ಕಾಯಿದೆ ಮತ್ತು ಐಪಿಸಿ ಅಡಿ ದೂರು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಣ ಸಿಕ್ಕಿದ ಸಂಬಂಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ಶನಿವಾರವೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಭಾನುವಾರ ನ್ಯಾಯಾಲಯದ ಅನುಮತಿ ಸಿಕ್ಕಿದ ಬಳಿಕ ಲೋಕೇಶ್ ಅಂಬೆಕಲ್ಲು, ವೆಂಕಟೇಶ್ ಪ್ರಸಾದ್ ಮತ್ತು ಗಂಗಾಧರ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.