ಮಹಿಳಾ ಸಹಕಾರ ಬ್ಯಾಂಕಿಗೆ 2.76 ಕೋಟಿ ನಿವ್ವಳ ಲಾಭ

bank
ಚಿಕ್ಕಮಗಳೂರು ನಗರದ ಬಸವನಹಳ್ಳಿಯಲ್ಲಿ ಶನಿವಾರ ನಡೆದ ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್‌ನ 24ನೆಯ ವಾರ್ಷಿಕ ಸಭೆಯನ್ನು ಬ್ಯಾಂಕಿನ ಅಧ್ಯಕ್ಷೆ ಬಿ.ಸಿ.ಗೀತಾ ಉದ್ಘಾಟಿಸಿದರು. ಸುಧಾರಾಜು, ಜೋಷಿ, ಸುಜಾತಾ, ಅರುಂಧತಿ ಇದ್ದರು.
Published on

ಚಿಕ್ಕಮಗಳೂರು: ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ 2.76ಕೋಟಿ ರೂ. ನಿವ್ವಳ ಲಾಭಗಳಿಸಿದ್ದು, ಷೇರುದಾರರಿಗೆ ಶೇ.12ರಷ್ಟು ಲಾಭವನ್ನು ವಿತರಿಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷೆ ಬಿ.ಸಿ.ಗೀತಾ ಪ್ರಕಟಿಸಿದರು.

ನಗರದ ಬಸವನಹಳ್ಳಿಯಲ್ಲಿ ಶನಿವಾರ ನಡೆದ ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್‌ನ 24ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಕಡಿಮೆ ಬಂಡವಾಳದಿಂದ ಪ್ರಾರಂಭವಾದ ಬ್ಯಾಂಕ್ ಇಂದು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ನಿರ್ದೇಶಕರ, ಸದಸ್ಯರ ಸಹಕಾರ ಸದಾ ಹೀಗೆ ಇರಬೇಕು ಎಂದರು.
1999ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಸಹಕಾರ ಇಲಾಖೆಯ ಅನುಮತಿ ಪಡೆದು ಪ್ರಾರಂಭಿಸಲಾಯಿತು. ಮಹಿಳಾ ಬ್ಯಾಂಕ್ ನಿರಂತರವಾಗಿ ಅಭಿವೃದ್ಧಿಪಥದಲ್ಲಿದ್ದು ಎ ವರ್ಗದ ಬ್ಯಾಂಕ್ ಎಂದು ಗುರುತಿಸಲ್ಪಟ್ಟಿದೆ. ಮುಂಬಯಿಯ ಬ್ಯಾಂಕೊ ಅವಿಷ್ ಪಬ್ಲಿಕೇಷನ್ ಉತ್ತಮ ಮಹಿಳಾ ಬ್ಯಾಂಕ್ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ತಿಳಿಸಿದರು.
2023 ಮಾ.31ಕ್ಕೆ 246.24 ಕೋಟಿ ರೂ ಠೇವಣಿ ಹೊಂದಿದೆ. ಪ್ರತಿವರ್ಷವೂ ಬ್ಯಾಂಕಿನ ಠೇವಣಿ ಸಂಗ್ರಹದಲ್ಲಿ ಪ್ರಗತಿ ಕಾಣುತ್ತಿದೆ. 172.12 ಕೋಟಿ ರೂ ಹೊರಬಾಕಿ ಸಾಲ, ವಾಹನಸಾಲ, ವೇತನಾಧರಿತ ಸಾಲ, ಗೃಹಪೋಪಕರಣ ಸಾಲ, ಗೃಹ ನಿರ್ಮಾಣ ಸಾಲ, ವ್ಯಾಪಾರಾಭಿವೃದ್ಧಿ ಸಾಲ ಸೇರಿದಂತೆ ವಿವಿಧ ರೀತಿಯ ಸಾಲಸೌಲಭ್ಯಗಳನ್ನು ಗ್ರಾಹಕರಿಗೆ ನೀಡಲಾಗಿದೆ ಎಂದು ತಿಳಿಸಿದರು.
ಒಟ್ಟು 6,896 ಸದಸ್ಯರನ್ನು ಹೊಂದಿರುವ ಮಹಿಳಾ ಬ್ಯಾಂಕ್ 896.92 ಲಕ್ಷ ರೂ ಷೇರು ಬಂಡವಾಳ ಹೊಂದಿದೆ. 24623.49 ಲಕ್ಷ ರೂ ಠೇವಣಿ ಸಂಗ್ರಹಿಸಿದೆ ಎಂದು ಹೇಳಿದರು.
ಬ್ಯಾಂಕಿನ ಉಪಾಧ್ಯಕ್ಷೆ ಸುಧಾರಾಜು, ಬ್ಯಾಂಕ್‌ನ ನಿರ್ದೇಶಕರಾದ ಬನಶಂಕರಿ ಜೋಷಿ, ಸುಜಾತಾ ಕೃಷ್ಣಮೂರ್ತಿ, ಕಮಲಾಬಸವರಾಜು, ಸೌಭಾಗ್ಯ ಗೋಪಾಲನ್, ಸರೋಜಮ್ಮ ಸಿದ್ದಮಲ್ಲಪ್ಪ, ಯಮುನಾಸಿ.ಶೆಟ್ಟಿ, ಜಯಶ್ರೀ ನಂಜರಾಜ್, ಜಯಲಕ್ಷ್ಮಿ ರಾಮೇಗೌಡ, ತಾರಾಮೋಹನ್, ಅನುಪಮಾ, ಕವಿತಾನಾಯಕ್, ಮೀನಾ, ಆಶಾ ಹೇಮಂತಕುಮಾರ್, ಅರುಂಧತಿ, ಎಂ.ಸಿ.ಸುಮಾ,
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಬಿ.ಆರ್.ಸತೀಶ್, ಶಾಖಾ ವ್ಯವಸ್ಥಾಕರಾಧ ಕವಿತಾ, ಅಜಿತ್‌ಕುಮಾರ್, ಶ್ರೀರಾಮ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net