

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕೇಂದ್ರ ಸರ್ಕಾರಕ್ಕೆ 2024-25ನೇ ಆರ್ಥಿಕ ವರ್ಷಕ್ಕೆ 2.69 ಲಕ್ಷ ಕೋಟಿ ರೂ. ಲಾಭಾಂಶದ ಮೊತ್ತವನ್ನು ಘೋಷಿಸಿದೆ. ಶುಕ್ರವಾರ ನಡೆದ ಆರ್ಬಿಐನ ಕೇಂದ್ರ ನಿದೇರ್ಶಕರ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. 2023-24ನೇ ವರ್ಷಕ್ಕೆ ಹೋಲಿಸಿದರೆ ಇದು ಶೇಕಡ 27.4ರಷ್ಟು ಹೆಚ್ಚಳವಾಗಿದೆ. ಭಾರತದ ಉತ್ಪನ್ನಗಳಿಗೆ ಅಮೆರಿಕದ ಹೆಚ್ಚುವರಿ ಸುಂಕ ಮತ್ತು ಪಾಕಿಸ್ತಾನದೊಂದಿಗಿನ ಸೇನಾ ಸಂಘರ್ಷದಿಂದ ಉಂಟಾ ಗಿರುವ ವೆಚ್ಚವನ್ನು ಸರಿದೂಗಿಸಲು ಇದು ನೆರವಾಗಲಿದೆ ಎಂದು ಅಂದಾಜಿ ಸಲಾಗಿದೆ. 2023-24ರಲ್ಲಿ ಆರ್ಬಿಐ 2.1 ಲಕ್ಷ ಕೋಟಿ ರೂ., 2022-23ರಲ್ಲಿ 87,416 ಕೋಟಿ ರೂ. ಲಾಭಾಂಶ ಮೊತ್ತವನ್ನು ಕೇಂದ್ರಕ್ಕೆ ನೀಡಿತ್ತು.
ತುರ್ತು ನಿಧಿ ಪ್ರಮಾಣ ಹೆಚ್ಚಳ: ಆರ್ಬಿಐ ಗವರ್ನರ್ ಆಗಿದ್ದ ಬಿಮಲ್ ಜಲನ್ ಅಧ್ಯಕ್ಷತೆಯ ಪರಿಣತರ ಸಮಿತಿ ನೀಡಿರುವ ಶಿಫಾರಸ್ಸಿನ ಅನ್ವಯ 2019ರಿಂದ ಆರ್ಥಿಕ ಬಂಡವಾಳ ಚೌಕಟ್ಟನ್ನು (ಇಸಿಎಫ್) ಅಳವಡಿಸಿಕೊಳ್ಳಲಾಗಿದೆ. ಇದರ ಆಧಾರದ ಮೇಲೆ ಕೇಂದ್ರಕ್ಕೆ ಲಾಭಾಂಶ ಪಾವತಿಸಲಾಗುತ್ತದೆ. ಮಾರ್ಚ್ನಲ್ಲಿ ನಡೆದಿದ್ದ ಸಭೆಯಲ್ಲಿ ಪರಿಷ್ಕೃತ ಆರ್ಥಿಕ ಬಂಡವಾಳದ ಚೌಕಟ್ಟಿಗೆ ಕೇಂದ್ರೀಯ ಮಂಡಳಿ ಸಭೆಯು ಅನುಮೋದನೆ ನೀಡಿತ್ತು. ಇದರ ಅನ್ವಯ ಸರ್ಕಾರಕ್ಕೆ ಲಾಭಾಂಶ ಪಾವತಿಸಲು ಕ್ರಮ ವಹಿಸಲಾಗಿದೆ ಎಂದು ಆರ್ಬಿಐ ತಿಳಿಸಿದೆ.
ಅರ್ಥವ್ಯವಸ್ಥೆಗೆ ಎದುರಾಗಬಹುದಾದ ಅಪಾಯ ಎದುರಿಸಲು ಆರ್ಬಿಐ ತೆಗೆದಿರಿಸುವ ತುರ್ತು ನಿಧಿಯ ಪ್ರಮಾಣವನ್ನು (ಸಿಆರ್ಬಿ) ಶೇಕಡ 4.50ರಿಂದ ಶೇ.7.50 ಮಿತಿಯಲ್ಲಿ ಕಾಯ್ದುಕೊಳ್ಳಬೇಕು ಎಂದು ಪರಿಷ್ಕೃತ ನಿಯಮಾವಳಿಯಲ್ಲಿ ತಿಳಿಸಲಾಗಿದೆ. ಅಂದರೆ ಆರ್ಬಿಐನ ಬ್ಯಾಲೆನ್ಸ್ಶೀಟ್ಗೆ ಅನುಗುಣವಾಗಿ ಅನಿರೀಕ್ಷಿತ ಹಣಕಾಸು ಪರಿಸ್ಥಿತಿ ಎದುರಿಸಲು ಇರುವ ತುರ್ತು ನಿಧಿಯ ಪ್ರಮಾಣ ಇದಾಗಿದೆ. ಇದರನ್ವಯ 2025-26ರಲ್ಲಿ ಸಿಆರ್ಬಿ ಉದ್ದೇಶಕ್ಕೆ ಮೀಸಲಿಡುವ ಮೊತ್ತವನ್ನು ಶೇ.7.50ಕ್ಕೆ ನಿಗದಿಪಡಿಸಲು ಮಂಡಳಿಯು ಸಮ್ಮತಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಇದನ್ನು ಶೇ.6.5ಕ್ಕೆ ನಿಗದಿಪಡಿಸಲಾಗಿತ್ತು.