ಹಿರಿಯ ವೈದ್ಯರಿಗೆ 2.09 ಕೋಟಿ ಧೋಖಾ

cyber crime
Published on

ಬೆಂಗಳೂರು: ಟ್ರೇಡಿಂಗ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಆಮಿಷ ಒಡ್ಡಿ ಹಿರಿಯ ವೈದ್ಯರಿಗೆ ಸೈಬರ್ ಕಳ್ಳರು 2.09 ಕೋಟಿ ರೂ. ವಂಚನೆ ಮಾಡಿದ್ದಾರೆ.

ಮೈಸೂರು ರಸ್ತೆ ನಾಯಂಡಹಳ್ಳಿ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ 70 ವರ್ಷದ ವೈದ್ಯರಿಂದ 2.09 ಕೋಟಿ ರೂ. ಹೂಡಿಕೆ ಮಾಡಿಸಿ ವಂಚನೆ ಮಾಡಿದ್ದಾರೆ.

ಏಪ್ರಿಲ್ 15ರಂದು ಹಿರಿಯ ವೈದ್ಯರು, ಗೂಗಲ್‌ನಲ್ಲಿ ಟ್ರೇಡಿಂಗ್ ಬಗ್ಗೆ ಸರ್ಚ್ ಮಾಡುತ್ತಿದ್ದಾಗ ಅಪರಿಚಿತ ವ್ಯಕ್ತಿ ನಂಬರ್ ಲಭ್ಯವಾಗಿದೆ. ಆತ ವಾಟ್ಸ್‌ಆ್ಯಪ್ ಗ್ರೂಪ್‌ಗೆ ವೈದ್ಯರನ್ನು ಸೇರಿಸಿಕೊಂಡು ಟ್ರೇಡಿಂಗ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ. ಬಳಿಕ ಆತ ಕಳುಹಿಸಿದ್ದ ಲಿಂಕ್ ಮೇಲೆ ಕ್ಲಿಕ್ ಮಾಡಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ವೈದ್ಯರು, 15 ದಿನಗಳ ಕಾಲ ತರಬೇತಿ ಪಡೆದು ಹೂಡಿಕೆ ಮಾಡಲು ಶುರು ಮಾಡಿದ್ದರು. ಮೊದಲು 50 ಸಾವಿರ ರೂ. ಹೂಡಿಕೆ ಮಾಡಿದಾಗ ಆ್ಯಪ್‌ನಲ್ಲಿ ಲಾಭಾಂಶ ಲಭ್ಯವಾಗಿದೆ ಎಂದು ತೋರಿಸಿ ಆಸೆ ಹುಟ್ಟಿಸಿದ್ದರು.

ಇದನ್ನು ನಂಬಿದ ವೈದ್ಯರು, ಹಂತ ಹಂತವಾಗಿ ಆ್ಯಪ್‌ನಲ್ಲಿ 2.09 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಹೆಚ್ಚಿನ ಲಾಭಾಂಶ ಬಂದಿರುವ ಬಗ್ಗೆ ಆ್ಯಪ್‌ನಲ್ಲಿ ನೋಡಿದ ವೈದ್ಯರು, ಡ್ರಾ ಮಾಡಲು ಮುಂದಾದಾಗ ಸೈಬರ್ ವಂಚಕರು, ಸಬೂಬು ಹೇಳಿ ಮುಂದೂಡಿದ್ದಾರೆ. ವೈದ್ಯರು ಒತ್ತಾಯ ಮಾಡಿದಾಗ ಸಂಪರ್ಕವೇ ಕಡಿತ ಮಾಡಿಕೊಂಡು ಆ್ಯಪ್ ಸರ್ವರ್ ಸ್ಥಗಿತ ಮಾಡಿ ವಂಚನೆ ಮಾಡಿದ್ದಾರೆ. ನೊಂದ ವೈದ್ಯರು, ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ.ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net