ಕಾಮಗಾರಿ ಮಾಡದೇ ಸಹಿ ಮಾಡಿದ್ದ ೧೯ ಮಂದಿ: ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ

Crime Logo
Published on

ಬೆಂಗಳೂರು: ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ವಿಳಂಬ ಹಾಗೂ ಕಮಿಷನ್ ಆರೋಪ ಮಾಡಿ ದಯಾಮರಣ ಕೋರಿ ರಾಜ್ಯ ಪಾಲರಿಗೆ ಪತ್ರ ಬರೆದಿದ್ದ ಬಿಬಿಎಂಪಿಯ ೫೭ ಮಂದಿ ಗುತ್ತಿಗೆದಾರರ ಪೈಕಿ ಕಾಮಗಾರಿ ಮಾಡದೇ ದೂರು ಪತ್ರಕ್ಕೆ ೧೯ ಮಂದಿ ಗುತ್ತಿಗೆದಾರರು ಸಹಿ ಹಾಕಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಗುತ್ತಿಗೆದಾರರ ಆರೋಪದ ಹಿನ್ನೆಲೆಯಲ್ಲಿ ಶೇಷಾದ್ರಿಪುರ ಎಸಿಪಿ ಪ್ರಕಾಶ್ ರೆಡ್ಡಿ ೫೭ ಮಂದಿ ಗುತ್ತಿಗೆದಾರರಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅದರಂತೆ ೫೭ ಮಂದಿ ಗುತ್ತಿಗೆದಾರರು ವಿಚಾರಣೆ ಎದುರಿಸಿದ್ದರು. ಪ್ರತಿ ಗುತ್ತಿಗೆದಾರ ನಡೆಸಿರುವ ಕಾಮಗಾರಿ, ಪಾವತಿಯಾದ ಬಿಲ್, ಬಾಕಿ ಬಿಲ್ ಹಾಗೂ ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಎಸಿಪಿ ಮಾಹಿತಿ ಸಂಗ್ರಹಿಸಿದ್ದರು. ಈ ಪೈಕಿ ೧೯ ಮಂದಿ ಗುತ್ತಿಗೆದಾರರು ಯಾವುದೇ ಕಾಮಗಾರಿ ನಡೆಸದೇ ಇದ್ದರೂ ದೂರು ಪತ್ರಕ್ಕೆ ಸಹಿ ಹಾಕಿರುವುದು ಗೊತ್ತಾಗಿದೆ.
ಹೀಗಾಗಿ ಸರ್ಕಾರಕ್ಕೆ ಮುಜುಗರ ತರುವ ನಿಟ್ಟಿನಲ್ಲಿ ದೂರು ಪತ್ರಕ್ಕೆ ಸಹಿ ಹಾಕಿದ ಆರೋಪದಡಿ ಈ ೧೯ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ೧೯ ಮಂದಿ ಗುತ್ತಿಗೆದಾರರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net