ಮದುವೆ ಆಮಿಷವೊಡ್ಡಿ 19 ಲಕ್ಷ ಧೋಖಾ

cyber crime
Published on

ಬೆಂಗಳೂರು: ಜೀವನ್‌ಶಾಂತಿ ಡಾಟ್ ಕಾಮ್‌ನಲ್ಲಿ ಪರಿಚಯಸ್ಥ ವ್ಯಕ್ತಿ, ಮದುವೆ ಆಗುವುದಾಗಿ ನಂಬಿಸಿ ಯುವತಿಯಿಂದ 19.50 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾನೆ.

ಯುಜಿಎಸ್ ಲೇಔಟ್ ನಿವಾಸಿ ಶ್ರುತಿ ಗುಪ್ತಾ ವಂಚನೆಗೆ ಒಳಗಾದ ಸಂತ್ರಸ್ತೆ. ಈಕೆ ಕೊಟ್ಟ ದೂರಿನ ಮೇರೆಗೆ ಕೇಂದ್ರವಿಭಾಗ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿರುವ ಯುವತಿ, ಮದುವೆ ಆಗುವ ಸಲುವಾಗಿ ಜೀವನ್ ಶಾಂತಿ ಡಾಟ್ ಕಾಮ್ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು ಸ್ವ-ವಿವರ ಅಪ್‌ಲೋಡ್ ಮಾಡಿದ್ದಳು.

ಇದನ್ನು ಗಮನಿಸಿದ ಅಭಿನವ್ ಗುಪ್ತಾ ಎಂಬಾತ ವಾಟ್ಸ್‌ಆ್ಯಪ್‌ನಲ್ಲಿ ಮಸೇಜ್ ಮಾಡಿ ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿದ್ದಾನೆ. ಇದಾದ ಸ್ವಲ್ಪ ದಿನಕ್ಕೆ ತನ್ನ ತಾಯಿಗೆ ಆರೋಗ್ಯ ಸರಿ ಇಲ್ಲದ ಕಾರಣ ಆಸ್ಪತ್ರೆಗೆ ದಾಖಲಿಸಿದ್ದು, ಮೆಡಿಕಲ್ ಬಿಲ್ ಪಾವತಿಗೆ ಹಣ ಬೇಕೆಂದು ಅಭಿನವ್ ಗುಪ್ತಾ ಮನವಿ ಮಾಡಿದ್ದಾನೆ. ಕಷ್ಟ ಇರಬೇಕೆಂದು ಯುವತಿ ಮೊದಲು 1 ಲಕ್ಷ ರೂ. ಪಾವತಿ ಮಾಡಿದ್ದಾಳೆ. ಮತ್ತಷ್ಟು ಹಣ ಬೇಕೆಂದು ಪದೇ ಪದೆ ನಾನ ಕಾರಣ ಹೇಳಿ ಯುವತಿ ಕಡೆಯಿಂದ ಹಂತ ಹಂತವಾಗಿ 19.50 ಲಕ್ಷ ರೂ. ಸುಲಿಗೆ ಮಾಡಿದ್ದಾನೆ.

ಮತ್ತೆ ಮತ್ತೆ ಹಣ ಕೇಳಿದಾಗ ಅನುಮಾನ ಬಂದು ಅಭಿನವ್ ಗುಪ್ತಾ ಹಿನ್ನೆಲೆಯನ್ನು ಪರಿಶೀಲನೆ ನಡೆಸಿದಾಗ ಆರೋಪಿ ಕೋಮಲ್ ಕುಮಾರಿ ಎಂಬಾಕೆ ಮೊಬೈಲ್, ಸಿಮ್ ಕಾರ್ಡ್ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ಸಂಪರ್ಕ ಮಾಡಿ ಹಣ ವಾಪಸ್ ಪಡೆಯಲು ಪ್ರಯತ್ನ ಮಾಡಿದಾಗ ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ನೊಂದ ಯುವತಿ, ಕೊನೆಗೆ ದಿಕ್ಕು ತೋಚದೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net