

ನವದೆಹಲಿ: ಕರ್ನಾಟಕದ 19 ಮಂದಿ ಸೇರಿದಂತೆ ದೇಶಾದ್ಯಂತ ಒಟ್ಟು 946 ಮಂದಿ ಪೊಲೀಸರು ಈ ಬಾರಿಯ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ವೃತ್ತಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಇವರಿಗೆ ನಾಳಿನ (ಜ.26) ಗಣರಾಜ್ಯೋತ್ಸವ ಸಮಾರಂಭದಲ್ಲಿ ಪದಕ ಪ್ರದಾನ ಮಾಡಲಾಗುತ್ತಿದೆ.
ಪದಕಕ್ಕೆ ಆಯ್ಕೆಯಾಗಿರುವ ಒಟ್ಟು 946 ಮಂದಿಯಲ್ಲಿ 205 ಪೊಲೀಸರು ರಾಷ್ಟ್ರಪತಿಗಳ ಶೌರ್ಯ ಪದಕಕ್ಕೆ ಭಾಜನರಾಗಿದ್ದಾರೆ. ವಿಶೇಷ ಸೇವಗಾಗಿ 89 ಮಂದಿ ಮತ್ತು ಪ್ರಶಂಸನೀಯ ಸೇವೆಗೆ 650 ಮಂದಿಗೆ ರಾಷ್ಟ್ರಪತಿ ಪದಕದ ಗೌರವ ದೊರಕುತ್ತಿದೆ.
ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಎಎಸ್ಐ ಮೋಹನ್ ಲಾಲ್ ಸಹ ಶೌರ್ಯ ಮರಣೋತ್ತರ ಪದಕಕ್ಕೆ ಆಯ್ಕೆಯಾಗಿದ್ದಾರೆ. ಪುಲ್ವಾಮ ದಾಳಿ ವೇಳೆ ಸಿಆರ್ಪಿಎಫ್ ಬೆಂಗಾವಲು ವಾಹನದತ್ತ ವೇಗವಾಗಿ ಬರುತ್ತಿದ್ದ ಸ್ಫೋಟಕ ತುಂಬಿದ ಐಇಡಿ ಲ್ಯಾಡೆನ್ ಕಾರನ್ನು ಗಮನಿಸಿ, ಅದರತ್ತ ಗುಂಡು ಹಾರಿಸಿ ಮೋಹನ್ ಲಾಲ್ ಹುತಾತ್ಮರಾಗಿದ್ದರು. ಈ ದಾಳಿ ವೇಳೆ 40 ಸಿಆರ್ಪಿಎಫ್ ಯೋಧರು ಪ್ರಾಣ ತ್ಯಾಗ ಮಾಡಿದ್ದರು.
ಸಿಆರ್ಪಿಎಫ್ ಹೆಚ್ಚು ಪದಕಕ್ಕೆ ಪಾತ್ರರಾಗಿದ್ದು, ಒಟ್ಟು 946ರಲ್ಲಿ 137 ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಉಳಿದಂತೆ ಉತ್ತರ ಪ್ರದೇಶ ಪೊಲೀಸರು (97), ಬಿಎಸ್ಎಫ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು (71) ಪದಕಗಳಿಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕದಿಂದ 19 ಮಂದಿ ಆಯ್ಕೆಯಾಗಿದ್ದು, ಮಂಗಳವಾರ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿಗಳ ಶೌರ್ಯ ಪದಕವನ್ನು ಸ್ವೀಕರಿಸಲಿದ್ದಾರೆ. (ಏಜೆನ್ಸೀಸ್)