

ಹೊಯ್ಸಳ ಕನ್ನಡ ಸಂಘ ಹಾಗೂ ಸವಿಗನ್ನಡ ಪತ್ರಿಕಾ ಬಳಗದಿಂದ ಭಾನುವಾರ ಕುವೆಂಪುನಗರದ ಗಾನಭಾರತೀ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ 18 ಸಾಧರಿಗೆ ಹೊಯ್ಸಳ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿವಿಧ ಕ್ಷೇತ್ರದ ಸಾಧಕಾರದ ಕೆ.ಟಿ.ವೀರಪ್ಪ, ಗಜಾನನ ಶರ್ಮ, ಜನಾರ್ಧನ ಭಟ್, ಅರಳು ಮಲ್ಲಿಗೆ ಪಾರ್ಥಸಾರಥಿ, ಬಿ.ಎಸ್. ಪ್ರಣತಾರ್ಥಿಹರನ್, ಎಚ್.ಟಿ.ಎಸ್. ಶೈಲಜಾ, ಟಿ.ಆರ್. ಅನಂತರಾಮು, ಎಸ್.ಎನ್.ಹೆಗಡೆ, ಡಾ.ಕೆ.ಎಸ್.ಸದಾನಂದ, ಕೆ.ಕುಮಾರ್, ಎಂ.ವಿ. ರೂಪಾ, ಎನ್.ವಿ.ದಿನೇಶ್, ಎಂ.ಎಸ್. ನವೀನ್, ಕೆ.ಎಸ್.ರಮಾಮಣಿ, ಶೃಂಗಾರ್ ಸಂಜೀವಶೆಟ್ಟಿ,ಯಶಸ್ವಿ ಸೋಮಶೇಖರ್, ಆರ್.ಎ. ಚೇತನರಾವ್, ಸಾ.ಕಾ.ಸುರೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ನೃತ್ಯಾಲಯ ಟ್ರಸ್ಟ್ ಅಧ್ಯಕ್ಷೆ ಡಾ.ತುಳಸೀ ರಾಮಚಂದ್ರ ಮಾತನಾಡಿ, ಕನ್ನಡ ಮೇಲಿನ ಪ್ರೀತಿ ನನಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ. ಆದ್ದರಿಂದ ಪ್ರತಿಯೊಬ್ಬರೂ ಕನ್ನಡದ ಮೇಲೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಉತ್ತರ ಕರ್ನಾಟಕದವಳಾದ ನನಗೆ ಕನ್ನಡಕ್ಕಿಂತ ಹಿಂದಿ, ಇಂಗ್ಲಿಷ್. ಮರಾಠಿ, ತೆಲುಗು ಸಂಪರ್ಕ ಹೆಚ್ಚಾಗಿತ್ತು. ಆದರೆ ಮೈಸೂರಿಗೆ ಬಂದ ನಂತರ ಕನ್ನಡ ಎಂ.ಎ. ಮಾಡಿದೆ. ಇದರಿಂದ ಒಳ್ಳೆಯವರ ಸ್ನೇಹ, ಸಂಬಂಧ, ಸಂಪರ್ಕಗಳು ದೊರೆತವು ಎಂದು ಅವರು ಸ್ಮರಿಸಿದರು.
‘ರಜತಗನ್ನಡ’, ಸವಿ ಸಂಚಿಕೆ ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಇವತ್ತಿನ ದಿನಮಾನಗಳಲ್ಲಿ ಪತ್ರಿಕೆಗಳನ್ನು ನಡೆಸುವುದು ತುಂಬಾ ಕಷ್ಟ. ಅದರಲ್ಲೂ ಯಾವುದೇ ಜಾಹೀರಾತು ಇಲ್ಲದೇ ಸಾಂಸ್ಕೃತಿಕ ಪತ್ರಿಕೆಗಳನ್ನು ನಡೆಸುವುದು ಇನ್ನೂ ಕಷ್ಟ ಎಂದರು.
ಜೆಎಸ್‌ಎಸ್ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಅವರು, ಹೊಯ್ಸಳ ಕನ್ನಡ ಸಂಘವು ಪ್ರತಿ ವರ್ಷ ಆಯಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನೇ ಗುರುತಿಸಿ ಗೌರವಿಸುವ ಮೂಲಕ ಇತರರಿಗೆ ಮೇಲ್ಪಂಕ್ತಿಯಾಗಿದೆ. ಇವತ್ತಿನ ಪ್ರಶಸ್ತಿ ಪುರಸ್ಕೃತರೆಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅದ್ವೀತಿಯ ಸಾಧನೆ ಮಾಡಿದವರೆ ಇದ್ದಾರೆ ಎಂದರು.
ಮೇಲುಕೋಟೆ ವಂಗೀಪುರ ನಂಬಿಮಠದ ಶ್ರೀ ಇಳೈ ಆಳ್ವಾರ್ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಅನಾಥಾಲಯ ಅಧ್ಯಕ್ಷ ಸಿ.ವಿ. ಗೋಪಿನಾಥ್, ಕೆನರಾ ಬ್ಯಾಂಕಿನ ನಿವೃತ್ತ ಮಹಾ ಪ್ರಬಂಧಕ ಡಾ.ಎಸ್.ಟಿ. ರಾಮಚಂದ್ರ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ಯು.ಜಿ. ಶೆಣೈ, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಮೈಸೂರು ಸಾಹಿತ್ಯ ದಾಸೋಹದ ಪದ್ಮಾ ಆನಂದ್, ಆನಂದ್, ಡಾ. ಸುಧಾ ರಮೇಶ್ ಮುಶ್ಯ ಅತಿಥಿಗಳಾಗಿದ್ದರು.