ಲಿಂಗನಮಕ್ಕಿಯಿಂದ ಈವರೆಗೆ 18 ಟಿಎಂಸಿ ನೀರು ಬಿಡುಗಡೆ

linganamakki (4)
ಲಿಂಗನಮಕ್ಕಿ ಜಲಾಶಯದ ಎಲ್ಲ ಗೇಟ್‌ಗಳಿಂದ ನೀರು ಹೊರಬಿಟ್ಟಿದ್ದ ಸಂದರ್ಭ.
Published on

ಕಾರ್ಗಲ್: ಕಳೆದ ತಿಂಗಳು ನಿರಂತರ ಮಳೆಯಿಂದಾಗಿ ಗರಿಷ್ಠ ಮಟ್ಟ ತಲುಪಿದ್ದ ಲಿಂಗನಮಕ್ಕಿ ಜಲಾಶಯದಿಂದ ಈವರೆಗೆ 18 ಟಿಎಂಸಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿದೆ.

ಪ್ರತಿ ವರ್ಷಕ್ಕಿಂತ ಈ ಬಾರಿ ಮುಂಚಿತವಾಗಿ ಗರಿಷ್ಠ ಮಟ್ಟ ತಲುಪಿದ ಲಿಂಗನಮಕ್ಕಿ ಜಲಾಶಯದಲ್ಲಿ ಸುರಕ್ಷತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಲ್ಲ ಹನ್ನೊಂದು ಗೇಟ್‌ಗಳ ಮೂಲಕ ಆ.19ರಂದು ಹೆಚ್ಚುವರಿ ನೀರನ್ನು ಶರಾವತಿ ನದಿಗೆ ಹರಿಸುವ ನಿರ್ಧಾರ ಕೈಗೊಂಡಿತ್ತು. ಲಿಂಗನಮಕ್ಕಿ, ಎಂಜಿಎಚ್‌ಇ ಹಾಗೂ ಶರಾವತಿ ವಿದ್ಯುದಾಗಾರದಲ್ಲಿ ಉತ್ಪಾದನೆಗೆ ನೀರಿನ ಬಳಕೆ ಹೊರತುಪಡಿಸಿ, ಉಳಿದೆಲ್ಲ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಯಿತು. ಒಳಹರಿವು ಇಳಿಮುಖವಾದ ಹಿನ್ನೆಲೆಯಲ್ಲಿ ಸೆ.4ರಂದು ಗೇಟ್‌ಗಳನ್ನು ಬಂದ್ ಮಾಡಲಾಗಿದೆ.

ತಲಾ 60 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ನಾಲ್ಕು ಯೂನಿಟ್‌ಗಳನ್ನು ಹೊಂದಿರುವ ಗೇರುಸೊಪ್ಪ ವಿದ್ಯುತ್ ಉತ್ಪಾದನಾ ಕ್ರೇಂದ್ರದಲ್ಲಿ ನೀರು ಪೋಲಾಗುವುದನ್ನು ತಕ್ಕ ಮಟ್ಟಿಗೆ ತಡೆಹಿಡಿದು ಬಳಸಿಕೊಳ್ಳಲಾಗಿದೆ. ಇಲ್ಲಿ ಒಮ್ಮೆಲೇ 20 ಸಾವಿರ ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳುವ ವ್ಯವಸ್ಥೆಯಿದೆ. ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದ ನೀರನ್ನು ಇಲ್ಲಿನ ಅಣೆಕಟ್ಟಿಗೆ ಅಳವಡಿಸಿರುವ ಐದು ಗೇಟ್‌ಗಳ ಮೂಲಕ ಹೊರಬಿಡುವುದು ಅನಿವಾರ್ಯ. ಆದರೆ ಈ ಬಾರಿ ಅಲ್ಲಿಯೂ ನೀರು ವ್ಯರ್ಥವಾಗುವ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ ಎಂದು ಕೆಪಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಗೇರುಸೊಪ್ಪ ನೀರಿನ ಸಂಗ್ರಹ ಹಾಗೂ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯಕ್ಕೆ ತಕ್ಕಂತೆ ಲಿಂಗನಮಕ್ಕಿಯಿಂದ ನೀ ಹೊರಹರಿಸಲಾಗಿದೆ. ಜತೆಗೆ ಗೇರುಸೊಪ್ಪದ ಕೆಳದಂಡೆ ಪ್ರದೇಶದಲ್ಲಿ ಪ್ರವಾಹ ಉಂಟಾಗದಂತೆ ಎಚ್ಚರವನ್ನೂ ವಹಿಸಲಾಗಿದೆ. ಜಲಾಶಯದ ಒಳಹರಿವು ಜಾಸ್ತಿಯಾದ ಕೆಲವು ಸಂದರ್ಭಗಳಲ್ಲಿ ಮಾತ್ರ ನೀರನ್ನು ತಡೆಹಿಡಿಯಲು ಸಾಧ್ಯವಾಗದೆ ಅನಿವಾರ್ಯವಾಗಿ ಗೇರುಸೊಪ್ಪೆಯಿಂದ ನೀರು ಹರಿಸಲಾಗಿದೆ. ಇದು ಅರಬ್ಬಿ ಸಮುದ್ರ ಸೇರಿದೆ.

ಪ್ರಸ್ತುತ ಜಲಾಶಯಕ್ಕೆ 8 ಸಾವಿರ ಕ್ಯೂಸೆಕ್ ನೀರು ಒಳಹರಿವಿದ್ದು, ಇಷ್ಟೇ ಪ್ರಮಾಣದ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಲಿಂಗನಮಕ್ಕಿ ಜಲಾಶಯದಲ್ಲಿ 1817.70 ಅಡಿ ನೀರು ಸಂಗ್ರಹವಿದೆ. ಸೆ.15ರವರೆಗೆ ಇದೇ ಮಟ್ಟವನ್ನು ಕಾಯ್ದುಕೊಳ್ಳಲಾಗುವುದು ಎಂದು ಅಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಆರ್.ಶಿವಕುಮಾರ್ ತಿಳಿಸಿದರು. ಸೆ.15ರ ನಂತರ ಪೂರ್ಣ ಭರ್ತಿ ಮಾಡಿಕೊಳ್ಳಲಾಗುವುದು. ಒಂದು ವೇಳೆ ಸೆ.20ರ ನಂತರ ಮಳೆ ಜೋರಾದರೆ ನೀರನ್ನು ಹೊರಬಿಡುವ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net