ಪರೋಟಾ-ರೋಟಿಗೆ ಶೇ.18 ಜಿಎಸ್​ಟಿ

Parota
Published on

ಬೆಂಗಳೂರು: ಸಾಂಪ್ರದಾಯಿಕವಾಗಿ ಭಾರತೀಯ ಮನೆಗಳಲ್ಲಿ ಸಿದ್ಧಪಡಿಸುವ ರೋಟಿ, ಖಾಕ್ರಾ, ಚಪಾತಿ ಹಾಗೂ ಪರೋಟಾಕ್ಕೂ ವ್ಯತ್ಯಾಸವಿದ್ದು, ಶೇ.5ರ ಬದಲಿಗೆ ಶೇ.18 ಜಿಎಸ್​ಟಿ ಅನ್ವಯಿಸಬೇಕು ಎಂದು ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್​ನ(ಎಎಆರ್) ಕರ್ನಾಟಕ ಪೀಠ ಆದೇಶಿಸಿದೆ.

ಸಿದ್ಧಪಡಿಸಿದ ಪ್ಯಾಕ್ಡ್ ಆಹಾರ ತಯಾರಿಕೆಯ ಬೆಂಗಳೂರು ಮೂಲದ ಸಂಸ್ಥೆ ಐಡಿ ಫ್ರೆಶ್ ಕುರಿತ ಅರ್ಜಿಗೆ ಈ ತೀರ್ಪು ಹೊರಬಿದ್ದಿದೆ. ಗೋಧಿ ಪರೋಟಾ ಹಾಗೂ ಮಲಬಾರ್ ಪರೋಟಾಗಳನ್ನು ಶೇ.5 ಜಿಎಸ್​ಟಿ ವಿಧಿಸಲಾಗುವ 1905ರ ಶೀರ್ಷಿಕೆಯಡಿ ವಿಭಾಗಿಸಬಹುದೇ ಎಂದು ಐಡಿ ಸಂಸ್ಥೆ ಕೋರಿತ್ತು. ಈ ವಿಭಾಗದಲ್ಲಿರುವ ರೋಟಿ, ಚಪಾತಿ ಹಾಗೂ ಖಾಕ್ರಾ ಜತೆಗೇ ಪರೋಟಾವನ್ನೂ ಸೇರಿಸಬಹುದಲ್ಲವೇ ಎಂಬುದು ಸಂಸ್ಥೆಯ ಕೋರಿಕೆಯಾಗಿತ್ತು. ಈ ಕುರಿತು ಪರಿಶೀಲಿಸಿರುವ ಪೀಠ, 1905ರ ಶೀರ್ಷಿಕೆಯಲ್ಲಿ ಪರೋಟಾವನ್ನು ಸೇರ್ಪಡೆ ಮಾಡಲಾಗದು. ರೋಟಿ, ಖಾಕ್ರಾ ಹಾಗೂ ಚಪಾತಿಯ ರೀತಿಯಲ್ಲಿ ಪರೊಟಾಗಳು ಸಂಪೂರ್ಣ ಬೇಯಿಸಿದ ಆಹಾರವಲ್ಲ. ಅವನ್ನು ಮತ್ತೊಮ್ಮೆ ಬೇಯಿಸಿ ಸೇವಿಸಬೇಕಾಗುತ್ತದೆ. ತಯಾರಿಕೆಯ ಜತೆಗೆ ಸಾಮಾನ್ಯ ಜನರ ಬಳಕೆ ಮತ್ತು ಅವಶ್ಯಕತೆಯ ಆಧಾರದಲ್ಲೂ ಪರೋಟಾ ಭಿನ್ನವಾಗಿ ಪರಿಗಣಿಸಲ್ಪಡುತ್ತವೆ. ಹಾಗಾಗಿ 2106ರ ಶೀರ್ಷಿಕೆಯಲ್ಲಿ ಪರಿಗಣಿಸಬೇಕು ಎಂದು ತಿಳಿಸಿದೆ.

2106ರ ಶೀರ್ಷಿಕೆಯಲ್ಲಿ ಒಳಪಡುವ ಪದಾರ್ಥಗಳಿಗೆ ಶೇ.18 ಜಿಎಸ್​ಟಿ ಪಾವತಿಸಬೇಕಾಗುತ್ತದೆ. ಈ ಕುರಿತು ಪ್ರತಿಕ್ರಿಯಿಸಿರುವ ಎಎಂಆರ್​ಜಿ ಆಂಡ್ ಅಸೋಸಿಯೇಟ್ಸ್​ನ ರಜತ್ ಮೋಹನ್, ಶೇ.5ರಿಂದ ಶೇ.18ಕ್ಕೆ ಅಂದರೆ ಶೇ.13 ಹೆಚ್ಚಿನ ತೆರಿಗೆ ಪಾವತಿಸುವುದು ರೋಟಿ ಮತ್ತು ಪರೋಟಾ ನಡುವೆ ವಿಂಗಡಣೆಯ ವಿವಾದವನ್ನು ಹೆಚ್ಚಿಸಿದೆ. ಸಾಮಾನ್ಯ ಭಾರತೀಯ ಭಾಷೆಯಲ್ಲಿ ರೋಟಿ ಮತ್ತು ಪರೋಟಾಗಳನ್ನು ಸಮಾನವಾಗಿ ಬಳಸಲಾಗುತ್ತದೆ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳಬೇಕಿತ್ತು. ಸಿದ್ಧ ಆಹಾರ ತಯಾರಿಕೆ ಕ್ಷೇತ್ರಕ್ಕೆ ಈ ತೀರ್ಪು ಆಘಾತ ನೀಡಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net