

ಸಾಗರ: ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಜ.18 ಮತ್ತು 19ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಸಂಭ್ರಮ ಮಹಾ ಸಮ್ಮೇಳನಡ್ಠ ವಿಶ್ವಾಮಿತ್ರ ಎನ್ನುವ ಶೀರ್ಷಿಕೆಯಡಿಯಲ್ಲಿ ಜರುಗಲಿದೆ.
ಸಾಗರದ ರಾಘವೇಶ್ವರ ಸಭಾಭವನದಲ್ಲಿ ನಡೆದ ಸಾಗರ ತಾಲೂಕು ಬ್ರಾಹ್ಮಣ ಮಹಾಸಭಾದ ಪೂರ್ವ ಸಿದ್ಧತಾ ಸಭೆಯಲ್ಲಿ ತಾಲೂಕು ಅಧ್ಯಕ್ಷ ರವೀಶ್ ಮಾತನಾಡಿ, ಸಂಸ್ಕೃತಿ, ಸಂಸ್ಕಾರ, ಸ್ವಾವಲಂಬನೆ ಧ್ಯೇಯದಡಿ ವೇದ, ಧರ್ಮ, ಸಂಸ್ಕೃತಿ ಹಾಗೂ ಸಂಸ್ಕಾರಗಳ ಸಂರಕ್ಷಣೆ ಗುರಿ ಹೊಂದಿ ಸಮ್ಮೇಳನ ನಡೆಯಲಿದೆ ಎಂದರು.
ತಾಲೂಕು ಕಾರ್ಯದರ್ಶಿ ಸುದರ್ಶನ ಮಾತನಾಡಿ, ಎರಡು ದಿನಗಳ ಸಮ್ಮೇಳನದಲ್ಲಿ ನಾಡಿನ ಎಲ್ಲ ಮಠದ ಯತಿವರೇಣ್ಯರು ಪಾಲ್ಗೊಂಡು ಮಾರ್ಗದರ್ಶನ ನೀಡಲಿದ್ದಾರೆ. 18ರ ಬೆಳಗ್ಗೆ 7ಕ್ಕೆ ಸಮ್ಮೇಳನ ಧ್ವಜಾರೋಹಣದಿಂದ ಆರಂಭಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮ, ಗೌರವ ಸಮರ್ಪಣೆ, ವಿಚಾರಗೋಷ್ಠಿ, ವಿಪ್ರ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಧರ್ಮಸಭೆಗಳು ನಡೆಯಲಿವೆ. ಕೇಂದ್ರ ಮತ್ತು ರಾಜ್ಯದ ರಾಜಕೀಯ ನೇತಾರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಬ್ರಾಹ್ಮಣ ಸಭಾದ ಕೆ.ಜಿ.ರಾಘವೇಂದ್ರ, ಕಾಳಿಂಗ ರಾವ್, ವಿನಾಯಕ ಜೋಯಿಸ್, ವೈ.ಮೋಹನ್, ಸಮಾಜದ ಹಿರಿಯರಾದ ಯು.ಎಚ್.ರಾಮಪ್ಪ, ಹವ್ಯಕ ಮಂಡಲದ ಅಧ್ಯಕ್ಷ ಮುರಳಿ ಗೀಜಗಾರು ಇತರರಿದ್ದರು.