

ಚಂಡೀಗಢ: ಕರೊನಾ ವೈರಸ್ ಹಾವಳಿಯಿಂದಾಗಿ ಈಗ ಬಹುತೇಕ ಶಾಲೆಗಳಲ್ಲಿ ಆನ್ಲೈನ್ ಶಿಕ್ಷಣ ಆರಂಭವಾಗಿದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆಗಳಿಗೆ ಅವರು ಹೋಗುವಂತಿಲ್ಲ. ಈ ಹಿನ್ನೆಲೆಯಲ್ಲಿ, ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಧಕ್ಕೆ ಬರುತ್ತದೆ ಎಂದು ಹೇಳಿಕೊಳ್ಳುತ್ತಿರುವ ಶಾಲೆಗಳು ಆನ್ಲೈನ್ ಮೂಲಕ ತರಬೇತಿ ನೀಡಲು ಶುರು ಮಾಡಿದೆ.
ಆದರೆ, ಅದೆಷ್ಟೋ ಮಕ್ಕಳ ಬಳಿ ಸ್ಮಾರ್ಟ್ಫೋನ್ಗಳೇ ಇಲ್ಲ. ಇದ್ದರೂ ಆನ್ಲೈನ್ ಕ್ಲಾಸ್ಗೆ ಯೋಗ್ಯವಾಗುವಂಥ ಫೋನ್ಗಳು ಲಭ್ಯವಿರುವುದಿಲ್ಲ. ಅದೇ ಇನ್ನೊಂದೆಡೆ, ಪಾಲಕರ ಬಳಿ ಫೋನ್ ಇದ್ದರೂ ಅದನ್ನು ಅವರು ಕೊಂಡೊಯ್ಯುವ ಕಾರಣದಿಂದ ಮಕ್ಕಳಿಗೆ ದುಬಾರಿ ಬೆಲೆಯ ಸ್ಮಾರ್ಟ್ಫೋನ್ ಕೊಡಿಸುವುದು ಅನಿವಾರ್ಯವಾಗಿಬಿಟ್ಟಿದೆ. ಆದರೆ ಮಕ್ಕಳಿಗೆ ಫೋನ್ ಕೊಡಿಸಲು ಸಾಧ್ಯವಾಗದ ಅದೆಷ್ಟೋ ಪಾಲಕರು ಇದೀಗ ಚಿಂತೆ ಮಾಡುವಂತಾಗಿದೆ.
ಇದೇ ಕಾರಣಕ್ಕೆ ಕಳೆದ ವಾರವಷ್ಟೇ ಕೇರಳದ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಲ್ಲಿ ಟಿವಿ ಹಾಗೂ ಸ್ಮಾರ್ಟ್ಫೋನ್ಗಳ ಮೂಲಕ ಆನ್ಲೈನ್ ಕ್ಲಾಸ್ಗಳು ನಡೆಯುತ್ತಿದೆ. ಆದರೆ ಮನೆಯಲ್ಲಿ ಟಿವಿಯಾಗಲೀ, ಸ್ಮಾರ್ಟ್ ಫೋನ್ ಆಗಲೀ ಇಲ್ಲದ ಕಾರಣ ಕ್ಲಾಸ್ ಮಿಸ್ ಆಗುತ್ತದೆ ಎಂದು ಆತಂಕಗೊಂಡಿದ್ದ 14 ವರ್ಷದ ದೇವಿಕಾ ಬಾಲಕೃಷ್ಣನ್ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಈ ಘಟನೆ ಇನ್ನೂ ಹಸಿಯಾಗಿರುವಾಗಲೇ ಇಂಥದ್ದೇ ಒಂದು ಘಟನೆ ಪಂಜಾಬ್ನ ಮನ್ಸಾ ಜಿಲ್ಲೆಯಲ್ಲಿ ನಡೆದಿದೆ. ಈಕೆ 11ನೇ ತರಗತಿ ವಿದ್ಯಾರ್ಥಿನಿ. ಕೂಲಿ ಕಾರ್ಮಿಕರೊಬ್ಬರ ಮಗಳಾಗಿರುವ ಈಕೆಯ ಬಳಿ ಸ್ಮಾರ್ಟ್ಫೋನ್ ಇರಲಿಲ್ಲ.
ಆನ್ಲೈನ್ ತರಗತಿ ನಡೆಯುತ್ತಿದ್ದ ಕಾರಣ, ಸ್ಮಾರ್ಟ್ಫೋನ್ ಕೊಡಿಸುವಂತೆ ಅಪ್ಪನನ್ನು ಕೇಳಿದ್ದಳು. ಆದರೆ ಅಷ್ಟು ದುಬಾರಿ ಬೆಲೆಯನ್ನು ನೀಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಇನ್ನು ತನಗೆ ಫೋನ್ ಸಿಗುವುದಿಲ್ಲ, ಕ್ಲಾಸ್ಗಳು ಮಿಸ್ ಆಗುತ್ತವೆ ಎಂದು ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ!
ಇದೇ ರೀತಿ ಕಳೆದ ತಿಂಗಳು ತಮ್ಮ ಮಕ್ಕಳಿಗೆ ಸ್ಮಾರ್ಟ್ಫೋನ್ ಕೊಡಿಸಲಿಲ್ಲ ಎಂದು ಮಹಿಳೆಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. (ಏಜೆನ್ಸೀಸ್)