

ಪಟನಾ: ವೀಸಾ ನಿಯಮವನ್ನು ಉಲ್ಲಂಘಿಸಿದ ಆರೋಪದಡಿ 17 ವಿದೇಶಿಗರನ್ನು ಪಟನಾ ಪೊಲೀಸರು ಮಂಗಳವಾರ ಬಂಧಿಸಿ ಜೈಲಿಗೆ ಹಾಕಿದ್ದಾರೆ.
ಈ 17 ಮಂದಿ ಪ್ರವಾಸಿಗರಂತೆ ಭಾರತಕ್ಕೆ ಬಂದಿದ್ದಾರೆ. ಆದರೆ ಇಲ್ಲಿ ಬಂದ ಬಳಿಕ ನಿಯಮವನ್ನು ಮೀರಿ ಧಾರ್ಮಿಕ ವಿಚಾರಗಳನ್ನು ಉಪದೇಶ ಮಾಡುತ್ತ, ಧರ್ಮ ಬೋಧಕರಂತೆ ಬಿಂಬಿಸಿಕೊಂಡಿದ್ದರು. ಟೂರಿಸ್ಟ್ ವಿಸಾ ನಿಯಮ ಉಲ್ಲಂಘನೆ ಮಾಡಿದ ಕಾರಣ ಅವರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ ಎಂದು ಪಟನಾ ಜಿಲ್ಲಾಧಿಕಾರಿ ಕುಮಾರ್ ರವಿ ತಿಳಿಸಿದ್ದಾರೆ.
ಈ 17 ಜನ ಕಳೆದ ತಿಂಗಳು ದೆಹಲಿ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದೂ ಮಾಹಿತಿ ನೀಡಿದ್ದಾರೆ. ಮಾ.23ರಂದು ದಿಘಾದ ಮಸೀದಿಯೊಂದರಲ್ಲಿ ಅಡಗಿದ್ದ 10 ಮಂದಿ ವಿದೇಶಿಗರನ್ನು ಪಟನಾ ಪೊಲೀಸರು ಬಂಧಿಸಿದ್ದರು.
ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ 960 ಮಂದಿ ಮುಸ್ಲಿಮರ ಟೂರಿಸ್ಟ್ ವೀಸಾವನ್ನು ಈಗಾಗಲೇ ಕೇಂದ್ರ ಗೃಹ ಸಚಿವಾಲಯ ಬ್ಲ್ಯಾಕ್ಲಿಸ್ಟ್ಗೆ ಹಾಕಿ, ರದ್ದುಗೊಳಿಸಿದೆ. (ಏಜೆನ್ಸೀಸ್)