

Fake Embassy: ಜು.23ರಂದು ಉತ್ತರ ಪ್ರದೇಶ ಪೊಲೀಸ್ನ ವಿಶೇಷ ಕಾರ್ಯಪಡೆ (STF) ಪಡೆಗೆ ಸಿಕ್ಕಿಬಿದ್ದ ಹರ್ಷವರ್ಧನ್ ಜೈನ್, ಅಸ್ವಿತ್ವದಲ್ಲೇ ಇಲ್ಲದ ದೇಶಗಳ ಹೆಸರಿನಲ್ಲಿ ಅಕ್ರಮವಾಗಿ ರಾಯಭಾರ ಕಚೇರಿ ನಡೆಸುತ್ತಿದ್ದ ಎಂಬುದು ತಡವಾಗಿ ಬೆಳಕಿಗೆ ಬಂದಿತು. ಪ್ರಕರಣದ ಬೆನ್ನಲ್ಲೇ ಆರೋಪಿಯನ್ನು ಬಂಧಿಸಿರುವ ಎಸ್ಟಿಎಫ್ ಅಧಿಕಾರಿಗಳು, ಹರ್ಷವರ್ಧನ್ನಿಂದ ಹಲವು ಅಚ್ಚರಿ ಮಾಹಿತಿಯನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರಪ್ರದೇಶದ ಲಖನೌನಲ್ಲಿ ನಕಲಿ ರಾಯಭಾರ ಕಚೇರಿಯನ್ನು ನಡೆಸುತ್ತಿದ್ದ ಆರೋಪಿ, ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಅನೇಕರಿಂದ ಹಣವನ್ನು ದೋಚಿರುವುದು ಗೊತ್ತಾಗಿದೆ. ನಂಬಿಸಿ ದ್ರೋಹ ಮಾಡುವುದಲ್ಲದೇ, ತಾನು ಸೃಷ್ಟಿಸಿದ ನಕಲಿ ಸಂಸ್ಥೆಗಳ ಮುಖೇನ ಹವಾಲಾ ದಂಧೆಯಲ್ಲಿ ಶಾಮಿಲಾಗಿರುವುದು ಎಸ್ಟಿಎಫ್ ತನಿಖೆಯಲ್ಲಿ ಬಟಾಬಯಲಾಗಿದೆ. ಈತನ ವಂಚನೆಯ ಜಾಲ ಬಹಳ ದೊಡ್ಡದಾಗಿದ್ದು, ಸುಮಾರು 300 ಕೋಟಿ ರೂ. ಹಗರಣ ಎನ್ನಲಾಗಿದೆ.
ಕಳೆದ 10 ವರ್ಷಗಳಲ್ಲಿ 162 ವಿದೇಶ ಪ್ರವಾಸ ಮತ್ತು ಬಹು ವಿದೇಶಿ ಬ್ಯಾಂಕ್ ಖಾತೆಗಳೊಂದಿಗೆ ಸಂಭಾವ್ಯ ಸಂಪರ್ಕ ಸೇರಿದಂತೆ ಎಂಟು ವರ್ಷಗಳ ಕಾಲ ಗಾಜಿಯಾಬಾದ್ನಲ್ಲಿ ನಕಲಿ ರಾಯಭಾರ ಕಚೇರಿ ನಡೆಸುತ್ತಿರುವುದಾಗಿ ಹರ್ಷವರ್ಧನ್ ಜೈನ್ ತಿಳಿಸಿದ್ದಾನೆ ಎಂದು ತನಿಖೆಯು ಬಹಿರಂಗಪಡಿಸಿದೆ. ಕಳೆದ ವಾರ ಗಾಜಿಯಾಬಾದ್ನಲ್ಲಿ ಬಾಡಿಗೆಗೆ ಪಡೆದ ಎರಡು ಅಂತಸ್ತಿನ ಮನೆಯಿಂದ ಜೈನ್ರನ್ನು ಅಧಿಕಾರಿಗಳು ಬಂಧಿಸಿದರು. ಇದೇ ತನ್ನ ನಕಲಿ ರಾಯಭಾರ ಕಚೇರಿ ಎಂದು ಆತ ತಿಳಿಸಿದ್ದಾನೆ.
ಉತ್ತರ ಪ್ರದೇಶದ ಎಸ್ಟಿಎಫ್ ಪಡೆ ನಡೆಸಿದ ತನಿಖೆಯಲ್ಲಿ ಹರ್ಷವರ್ಧನ್, ಉದ್ಯೋಗ ದಂಧೆ ನಡೆಸುವಲ್ಲಿ ಭಾಗಿಯಾಗಿರುವುದು ಮತ್ತು ಹವಾಲಾ ಮಾರ್ಗದ ಮೂಲಕ ಹಣ ವರ್ಗಾವಣೆಯಲ್ಲಿಯೂ ತೊಡಗಿರುವುದು ಇದೀಗ ಸ್ಪಷ್ಟವಾಗಿದೆ. ಗಾಜಿಯಾಬಾದ್ ಸುತ್ತಮುತ್ತಲಿನಲ್ಲಿ ನಡೆದ ದಾಳಿಯ ಸಮಯದಲ್ಲಿ, ಪೊಲೀಸರು ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್ಗಳನ್ನು ಹೊಂದಿದ್ದ ನಾಲ್ಕು ಐಷಾರಾಮಿ ಕಾರು, ನಕಲಿ ದಾಖಲೆಗಳು ಮತ್ತು ದುಬಾರಿ ಮೌಲ್ಯದ ವಾಚ್ಗಳ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ,(ಏಜೆನ್ಸೀಸ್).