ನೋವುಂಡು ನಗಬೇಕೇ? 16 ವರ್ಷ ಕಾಡಿ, ಬೇಡಿದ ನಂತರ ರತ್ನಗಂಬಳಿ, ಅದನ್ನು ಹಾಸುವುದೆಲ್ಲಿ?

Untitled design (4)
Published on

ಕನ್ನಡ, ಕರ್ನಾಟಕ, ನೆಲ-ಜಲ-ಭಾಷೆ, ಕನ್ನಡಿಗರ ಅಸ್ಮಿತೆ ಅಂತ ಬಂದಾಗ ನಮಗೆ ಮೊದಲು ನೆನಪಾಗುವುದೇ ಡಾ. ರಾಜಕುಮಾರ್. ಅವರ ಬಳಿಕ ಕನ್ನಡ ಚಿತ್ರರಂಗದ ಮೇರುನಟನಾಗಿ, ವ್ಯಕ್ತಿಯಾಗಿ ‘ಐದು ಕೋಟಿ ಕನ್ನಡಿಗರ ಶಕ್ತಿಯಾಗಿ’ ಮನೆ, ಮನದಲ್ಲಿ ಸೇರಿದ್ದವರು ಡಾ. ವಿಷ್ಣುವರ್ಧನ್. ಆದರೆ, ವಿಶ್ವ ಸಿನಿಮಾ ಇತಿಹಾಸದಲ್ಲೇ ಇದುವರೆಗೂ ಬಹುಶಃ ಡಾ. ವಿಷ್ಣುವರ್ಧನ್ ಅವರಂತೆ ಯಾವ ನಟನೂ ಬದುಕಿರುವಾಗ ಆಗಲೀ ಅಥವಾ ನಿಧನ ಹೊಂದಿದ ಬಳಿಕವಾಗಲೀ, ತಾನ್ಯಾವ ತಪು್ಪ ಮಾಡದೇ ಹಲವು ದಶಕಗಳ ಕಾಲ ವಿವಾದಕ್ಕೀಡಾದ, ಬಲಿಪಶುವಾದ ಉದಾಹರಣೆ ಮತ್ತೊಬ್ಬರಿಲ್ಲ. ಸಂಪತ್ ಕುಮಾರ್ ಎಂಬ ಸಾಮಾನ್ಯ ಹುಡುಗ, ಅಸಾಮಾನ್ಯ ಸಾಹಸಸಿಂಹನಾಗಿ ಬೆಳೆದು ಬಂದ ಬಗೆ ಇದೆಯಲ್ಲ, ಬಳಿಕ ಎದುರಿಸಿದ ಕಷ್ಟಗಳಿವೆಯಲ್ಲ, ನಿಧನರಾದ ಬಳಿಕವೂ ಅವರ ಅಭಿಮಾನಿಗಳು ಎದುರಿಸುತ್ತಿರುವ ನೋವಿದೆಯಲ್ಲ, ಅದಕ್ಕೆ ಏನು ವರ ಕೊಟ್ಟರೂ ಕಡಿಮೆಯೇ.

Telugu Actor's Controversial Statement Over Vishnuvardhan Angers  Sahasasimha Fans

| ಹರ್ಷವರ್ಧನ್ ಬ್ಯಾಡನೂರು

ಡಾ. ವಿಷ್ಣುವರ್ಧನ್ 2009ರ ಡಿಸೆಂಬರ್ 30ರಂದು ನಿಧನ ಹೊಂದಿದರು. ದಿ. ಬಾಲಕೃಷ್ಣ ಅವರ ಕುಟುಂಬದ ಒಡೆತನದಲ್ಲಿದ್ದ ಅಭಿಮಾನ್ ಸ್ಟುಡಿಯೋದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಡಾ. ವಿಷ್ಣು ಅಂತ್ಯಕ್ರಿಯೆ ನೆರವೇರಿಸಲಾಯಿತು. ಆದರೆ, 20 ಎಕರೆಯ ಸ್ಟುಡಿಯೋ ಒಡೆತನಕ್ಕೆ ಸಂಬಂಧಿಸಿದಂತೆ ಬಾಲಕೃಷ್ಣ ಅವರ ಮಕ್ಕಳಾದ ಗೀತಾ ಬಾಲಿ, ಶ್ರೀನಿವಾಸ್ ಮತ್ತು ಗಣೇಶ್ ಮಧ್ಯೆ 2004ರಿಂದಲೂ ಕೋರ್ಟ್​ನಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಹೀಗಾಗಿ ಡಾ. ಭಾರತಿ ವಿಷ್ಣುವರ್ಧನ್, ಪತಿಯ ಹುಟ್ಟೂರಾದ ಮೈಸೂರಿನಲ್ಲೇ ವಿಷ್ಣು ಸ್ಮಾರಕ ನಿರ್ವಿುಸಬೇಕೆಂದು ಒತ್ತಾಯಿಸಿದರು. ಮತ್ತೊಂದೆಡೆ ಅಭಿಮಾನಿಗಳು ಅವರ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ನಿರ್ವಿುಸಬೇಕೆಂದು ಒತ್ತಾಯಿಸಿದರು. ಜತೆಗೆ ಅಭಿಮಾನಿಗಳೇ ಸೇರಿ ಶಂಖ ಆಕಾರದ ಸ್ಮಾರಕವನ್ನೂ ನಿರ್ವಿುಸಿದರು.

ಸ್ಟುಡಿಯೋ ಒಡೆತನದ ವ್ಯಾಜ್ಯ ಬಗೆಹರಿಯದ ಕಾರಣ 2017ರಲ್ಲಿ ಕೆಂಗೇರಿ ಸಮೀಪದ ಮೈಲಸಂದ್ರದ 10 ಗುಂಟೆ ಜಾಗದಲ್ಲಿ ಸ್ಮಾರಕ ನಿರ್ವಿುಸುವ ಬಗ್ಗೆ ಚರ್ಚೆಗಳು ನಡೆದವು. ಆದರೆ, ಅದು ತುರಹಳ್ಳಿ ಅರಣ್ಯ ಪ್ರದೇಶದ ಬಫರ್ ಜೋನ್​ಗೆ ಸೇರುತ್ತದೆ ಎಂದು ಪರಿಸರತಜ್ಞರು, ಪರಿಸರಪ್ರೇಮಿಗಳಿಂದ ವಿರೋಧ ವ್ಯಕ್ತವಾಯಿತು. ಈ ಮಧ್ಯೆ 2020ರಲ್ಲಿ ಮೈಸೂರಿನಲ್ಲಿ ವಿಷ್ಣು ಸ್ಮಾರಕಕ್ಕೆ ಜಾಗ ನಿಗದಿಪಡಿಸಿ, ಶಂಕುಸ್ಥಾಪನೆ ಮಾಡಲಾಯಿತು. 2023ರ ಏಪ್ರಿಲ್​ನಲ್ಲಿ ಭವ್ಯ ಸ್ಮಾರಕ ಲೋಕಾರ್ಪಣೆ ಮಾಡಲಾಯಿತು. ಆಗಿನಿಂದಲೂ ಭಾರತಿ ವಿಷ್ಣುವರ್ಧನ್ ಮತ್ತು ಕುಟುಂಬದವರು ಪ್ರತಿ ವರ್ಷ ವಿಷ್ಣುವರ್ಧನ್ ಜಯಂತಿ ಮತ್ತು ಪುಣ್ಯಸ್ಮರಣೆಯಂದು ಮೈಸೂರಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ, 2009ರಿಂದಲೂ ಅಭಿಮಾನ್ ಸ್ಟುಡಿಯೋನೇ ವಿಷ್ಣು ಪುಣ್ಯಭೂಮಿ ಎಂದು ನಂಬಿರುವ ಅಭಿಮಾನಿಗಳು ಪ್ರತಿವರ್ಷ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದರು.

Undated Photo Shows Kannada Actor Vishnuvardhan Editorial Stock Photo -  Stock Image | Shutterstock Editorial

ಹಾಗೇ ಅಲ್ಲಿಯೇ ಜಾಗ ನೀಡಬೇಕೆಂದು ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಆದರೆ, ಅರ್ಜಿಯನ್ನು ಕೋರ್ಟ್ ವಜಾ ಮಾಡಿತ್ತು. ಇದೆಲ್ಲದರ ನಡುವೆ 2018ರಲ್ಲಿ ಶ್ರೀನಿವಾಸ್ ಮತ್ತು 2024ರಲ್ಲಿ ಗಣೇಶ್ ವಿಧಿವಶರಾದರು. ಆದರೆ, ಬಾಲಕೃಷ್ಣ ಪುತ್ರಿ ಗೀತಾ ಮತ್ತು ಗಣೇಶ್ ಪುತ್ರ ಕಾರ್ತಿಕ್ ನಡುವೆ ಅಭಿಮಾನ್ ಸ್ಟುಡಿಯೋ ಒಡೆತನದ ವ್ಯಾಜ್ಯ ಮುಂದುವರಿದಿತ್ತು. ಅದರ ನಡುವೆಯೇ ಕಳೆದ ತಿಂಗಳು ರಾತ್ರೋರಾತ್ರಿ ವಿಷ್ಣು ಸ್ಮಾರಕವನ್ನು ನೆಲಸಮ ಮಾಡಲಾಯಿತು. ಅದಾದ ಕೆಲ ದಿನಗಳಲ್ಲೇ ನಟ ಕಿಚ್ಚ ಸುದೀಪ್, ಕೆಂಗೇರಿಯ ತಮ್ಮ ಸ್ವಂತ ಅರ್ಧ ಎಕರೆ ಜಾಗದಲ್ಲಿ, ಅಭಿಮಾನಿಗಳ ಜತೆ ಸೇರಿ ವಿಷ್ಣು ಸ್ಮಾರಕ ನಿರ್ವಿುಸುವುದಾಗಿ ಘೋಷಿಸಿದರು. ಈಗಾಗಲೇ ಅದರ ಕೆಲಸಗಳೂ ನಡೆಯುತ್ತಿವೆ ಎನ್ನಲಾಗಿದೆ. ಅದರ ನಡುವೆ ಅಭಿಮಾನ್ ಸ್ಟುಡಿಯೋ ಅರಣ್ಯ ಇಲಾಖೆಗೆ ಸೇರಿದ ಜಾಗವೆಂದು ರಾಜ್ಯ ಸರ್ಕಾರ ಅದನ್ನು ಮರುವಶಪಡಿಸಿಕೊಂಡಿದೆ. ಅದಾಗುತ್ತಲೇ ಅಭಿಮಾನಿಗಳು ಈಗ ಮತ್ತೆ ಸ್ಟುಡಿಯೋದ ಜಾಗದಲ್ಲೇ ವಿಷ್ಣು ಸ್ಮಾರಕ ನಿರ್ವಿುಸಲು ಅನುವು ಮಾಡಿಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಇದೀಗ 75ನೇ ಜಯಂತಿಯಂದೇ (ಸೆಪ್ಟೆಂಬರ್ 18), ಡಾ. ವಿಷ್ಣುವರ್ಧನ್ ಅಂತ್ಯಕ್ರಿಯೆ ನಡೆದ ಜಾಗದಲ್ಲಿ ಅಭಿಮಾನಿಗಳಿಗೆ ಪ್ರವೇಶವಿಲ್ಲ, ಅವರ ಹುಟ್ಟುಹಬ್ಬ ಆಚರಿಸುವಂತಿಲ್ಲ.

ಹೀಗೆ 16 ವರ್ಷಗಳಿಂದಲೂ ಅಭಿಮಾನ್ ಸ್ಟುಡಿಯೋ ಜಾಗದ ವಿವಾದ ಬಗೆಹರಿಸದ ಸರ್ಕಾರ ಇದೀಗ ಆ ಜಾಗವನ್ನು ಮರುವಶಪಡಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಅಲ್ಲಿಯೇ ಸ್ಮಾರಕ ನಿರ್ವಿುಸುವ ಆಶಾವಾದ ವಿಷ್ಣು ಅಭಿಮಾನಿಗಳಲ್ಲಿ ಮೂಡಿಸಿದೆ. ಅದರ ಜತೆಗೆ ಈ ವರ್ಷದ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸುವ ಮೂಲಕ ಅಭಿಮಾನಿಗಳನ್ನು ಸಮಾಧಾನಪಡಿಸಲು ಯತ್ನಿಸಿದೆ. ಆದರೆ, ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ, ಪುಣ್ಯತಿಥಿಯಂದು ಮೈಸೂರಿನಲ್ಲಿ ಕುಟುಂಬದವರು ಒಪ್ಪಿ ನಿರ್ವಿುಸಲಾಗಿರುವ ಸ್ಮಾರಕಕ್ಕೆ ಹೋಗಬೇಕೋ, ಅಭಿಮಾನ್ ಸ್ಟುಡಿಯೋಗೆ ಬರಬೇಕೋ ಅಥವಾ ನಟ ಸುದೀಪ್ ನಿರ್ವಿುಸುತ್ತಿರುವ ಹೊಸ ಸ್ಮಾರಕಕ್ಕೆ ಹೋಗಬೇಕೋ? ಎಂಬ ಗೊಂದಲ ನಿರ್ವಣವಾಗಿದೆ.

ಜೀವಮಾನ ಸಾಧನೆಯ ಬಳಿಕವೂ ಅತ್ಯುತ್ತಮ ನಟ ಪ್ರಶಸ್ತಿ

ಸಾಮಾನ್ಯವಾಗಿ ನಟನೆಯಿಂದ ದೂರ ಉಳಿದ ದಿಗ್ಗಜ ಕಲಾವಿದರಿಗೆ ಸರ್ಕಾರದ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತದೆ. ಆದರೆ, ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಬಳಿಕವೂ ಚಿತ್ರರಂಗದಲ್ಲಿ ಸಕ್ರಿಯರಾಗಿ ಅತ್ಯುತ್ತಮ ನಟ ರಾಜ್ಯಪ್ರಶಸ್ತಿ ಪಡೆದ ಹೆಗ್ಗಳಿಕೆ ವಿಷ್ಣುವರ್ಧನ್​ರಿಗೆ ಸಲ್ಲುತ್ತದೆ. ಹೌದು, 2007ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ವಿಷ್ಣುರಿಗೆ ಡಾ. ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿತ್ತು. ಅದಾಗಿ ಒಂದೇ ವರ್ಷದಲ್ಲಿ ‘ಆಪ್ತರಕ್ಷಕ’ ಚಿತ್ರದ ಅಭಿನಯಕ್ಕಾಗಿ ವಿಷ್ಣುವರ್ಧನ್ ಅತ್ಯುತ್ತಮ ನಟ ರಾಜ್ಯಪ್ರಶಸ್ತಿಗೆ ಭಾಜನರಾದರು. ಅಂದಹಾಗೆ ಡಾ. ರಾಜಕುಮಾರ್ ಅತಿಹೆಚ್ಚು ಅರ್ಥಾತ್ 9 ಅತ್ಯುತ್ತಮ ನಟ ರಾಜ್ಯಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರೆ, ಅವರ ನಂತರದ ಸ್ಥಾನದಲ್ಲಿ ವಿಷ್ಣುವರ್ಧನ್ 7 ರಾಜ್ಯಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Kundali milan matching of Vishnuvardhan and Bharathi Vishnuvardhan -  Jothishi

ಸರ ಮತ್ತು ಕಡಗದ ಕಥೆ

ಡಾ. ವಿಷ್ಣುವರ್ಧನ್ ಸಿನಿಮಾಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಕೈಗೆ ಕಡಗ ಧರಿಸುತ್ತಿದ್ದರು. ಹಾಗೇ ಒಂದು ನವರತ್ನ ಸರವನ್ನೂ ಧರಿಸುತ್ತಿದ್ದರು. 1980ರಲ್ಲಿ ಒಮ್ಮೆ ವಿಷ್ಣುವರ್ಧನ್ ಬೀದರ್​ಗೆ ಹೋಗಿದ್ದಾಗ ಅಲ್ಲಿನ ಗುರುದ್ವಾರಕ್ಕೆ ಭೇಟಿ ನೀಡಿದ್ದರು. ಗುರುದ್ವಾರದ ಗುರುಗಳು ಅವರಿಗೆ ಆಶೀರ್ವದಿಸಿ ಕಡಗ ಮತ್ತು ಕತ್ತಿ ಕೊಟ್ಟಿದ್ದರಂತೆ. ಆಗಿನಿಂದಲೂ ವಿಷ್ಣು ಕಡಗ ಧರಿಸುತ್ತಿದ್ದರು. ಅವರಿಗೆ ಆ ಕಡಗ ಮೇಲೆ ಅದೆಷ್ಟು ಪ್ರೀತಿ ಇತ್ತೆಂದರೆ, ‘ಇದು ನನ್ನ ಅವಿಭಾಜ್ಯ ಅಂಗ. ಇದಿಲ್ಲದೆ ನಾನು ಮನೆಯಿಂದ ಹೊರಗೆ ಹೋಗುವುದಿಲ್ಲ. ಇದು ನನ್ನ ಗುರುತೇ ಆಗಿಬಿಟ್ಟಿದೆ’ ಎಂದಿದ್ದರು. ಹಾಗೇ ಭಾರತಿ ವಿಷ್ಣುವರ್ಧನ್ ಅವರ ಬಳಿ ಇದ್ದ ಮೂರು ಎಳೆ ನವರತ್ನ ಸರದಲ್ಲಿ ಒಂದು ಎಳೆಯನ್ನು ವಿಷ್ಣುವರ್ಧನ್ ಧರಿಸುತ್ತಿದ್ದರು. ನವರತ್ನದಿಂದ ಪಾಸಿಟಿವ್ ವೈಬ್ರೇಷನ್ ಬರುವ ಕಾರಣ ಧರಿಸುವುದಾಗಿ ಅವರು ಹೇಳಿಕೊಂಡಿದ್ದರು. ‘ಚಿನ್ನ, ಒಡವೆ ಅಂದರೆ ನನಗೆ ಅಷ್ಟಕ್ಕಷ್ಟೆ. ಆದರೆ, ಈ ಸರವನ್ನು ಮಾತ್ರ ಆಸೆಪಟ್ಟು ಧರಿಸುತ್ತೇನೆ’ ಎಂದು ವಿಷ್ಣು ಹೇಳಿದ್ದರು.

ಲಕ್ಕಿ ನಂ. 321!

ವಿಷ್ಣು ಅವರಿಗೆ 321 ಲಕ್ಕಿ ನಂಬರ್​ಗಳಾಗಿದ್ದವು. ಹೀಗಾಗಿ ತಮ್ಮ ಪ್ರೀತಿಯ ಮರ್ಸಿಡೀಸ್ ಬೆಂಝ್​ ಕಾರಿಗೆ 123 ಎಂದು ನೋಂದಣಿ ಮಾಡಿಸಿದ್ದ ಅವರು, ಅದೇ ಸಂಖ್ಯೆಯಲ್ಲಿ ಕೊನೆಗೊಳ್ಳುವ ಫೋನ್ ನಂಬರ್ ಸಹ ಬಳಸುತ್ತಿದ್ದರಂತೆ.

ಜನಮಾನಸದಲ್ಲಿ ಅಜರಾಮರ

ಸಾಹಸ ಸಿಂಹ, ಕರುನಾಡ ಕರ್ಣ, ಅಭಿನಯ ಭಾರ್ಗವ, ದಾದಾ, ಕನ್ನಡ ಚಿತ್ರರಂಗದ ಆಂಗ್ರಿ ಯಂಗ್​ವ್ಯಾನ್ ಡಾ. ವಿಷ್ಣುವರ್ಧನ್. ಮೂರೂವರೆ ದಶಕಗಳ ಸುದೀರ್ಘ ಸಿನಿಮಾ ಜೀವನದಲ್ಲಿ 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಮಿಂಚಿರುವ ಅವರು, 80 ಮತ್ತು 90ರ ದಶಕದ ನಿಜವಾದ ಪ್ಯಾನ್ ಇಂಡಿಯಾ ಹೀರೋ ಆಗಿದ್ದರು. 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ದ್ವಿಪಾತ್ರದಲ್ಲಿ, ಎರಡು ಚಿತ್ರಗಳಲ್ಲಿ ತ್ರಿಪಾತ್ರದಲ್ಲಿ ನಟಿಸಿರುವುದು ಅವರ ಮತ್ತೊಂದು ವಿಶೇಷ. ಕೇವಲ 59ನೇ ವಯಸ್ಸಿನಲ್ಲೇ 2009ರ ಡಿಸೆಂಬರ್ 30ರಂದು ಅಗಲಿದರೂ, ಈಗಲೂ ಜನಮಾನಸದಲ್ಲಿ ಅವರು ಅಜರಾಮರ. ಹೀಗಾಗಿಯೇ ಅವರ ಕಾಲಾನಂತರವೂ ‘ನಾಗರಹಾವು’ (2016), ‘ರಾಜಾಸಿಂಹ’ (2018) ಮತ್ತು ‘ಛೂಮಂತರ್’ (2025) ಚಿತ್ರಗಳಲ್ಲಿ ಸಿಜಿ ಮೂಲಕ ಅವರನ್ನು ಬೆಳ್ಳಿತೆರೆಯ ಮೇಲೆ ಮರುಸೃಷ್ಟಿಸುವ ಮೂಲಕ ಚಿತ್ರತಂಡಗಳು ಮತ್ತೊಮ್ಮೆ, ಮಗದೊಮ್ಮೆ ಸ್ಮರಿಸಿಕೊಂಡಿವೆ. ಅವರ ನಟನೆಗೆ ತಲಾ ಏಳು ರಾಜ್ಯಪ್ರಶಸ್ತಿಗಳು, ಫಿಲಂಫೇರ್​ಗಳು ಹಾಗೂ ಡಾ. ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ, ಚೆನ್ನೈನಲ್ಲಿ ಕಲಾದೇವಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಯ ಜತೆಗೆ ಹಲವು ಗೌರವಗಳು ಸಂದಿವೆ. ಇತ್ತೀಚೆಗಷ್ಟೆ ಕರ್ನಾಟಕ ರತ್ನ ಪ್ರಶಸ್ತಿಯನ್ನೂ ಘೋಷಿಸಲಾಗಿದೆ.

Bharathi Vishnuvardhan gifts husband's favourite turban to this man |  Asianet Newsable

ಗುರು ಬನ್ನಂಜೆ ಗೋವಿಂದಾಚಾರ್ಯ

ಸಂಸ್ಕೃತ ವಿದ್ವಾಂಸರು, ಖ್ಯಾತ ಪ್ರವಚನಕಾರರು ಮತ್ತು ತತ್ವಜ್ಞಾನಿಗಳೂ ಆಗಿದ್ದ ಬನ್ನಂಜೆ ಗೋವಿಂದಾಚಾರ್ಯರಿಂದ ವಿಷ್ಣುವರ್ಧನ್ ಪ್ರಭಾವಕ್ಕೊಳಗಾಗಿದ್ದರು. ಅವರನ್ನು ತಮ್ಮ ಆಧ್ಯಾತ್ಮಿಕ ಗುರು ಎಂದೇ ಹೇಳಿಕೊಳ್ಳುತ್ತಿದ್ದರು. ಅಂದಹಾಗೆ, ಗೋವಿಂದಾಚಾರ್ಯರ ಪ್ರವಚನ ಕೇಳಲು ಸಾಮಾನ್ಯವಾಗಿ ಭಾರತಿ ವಿಷ್ಣುವರ್ಧನ್ ಹೋಗುತ್ತಿದ್ದರಂತೆ. ಒಮ್ಮೆ ಪತ್ನಿಯ ಜತೆ ವಿಷ್ಣುವರ್ಧನ್ ಕೂಡ ತೆರಳಿದ್ದರು. ಮೊದಲ ಬಾರಿ ಅವರ ಪ್ರವಚನ ಕೇಳಿ, ಅವರ ಜತೆ ಮಾತನಾಡಿ, ಚರ್ಚಿಸಿ ಪ್ರಭಾವಿತರಾದ ವಿಷ್ಣುವರ್ಧನ್ ಕ್ರಮೇಣ ಅಧ್ಯಾತ್ಮದಲ್ಲಿ ಆಸಕ್ತಿ ಬೆಳೆಸಿಕೊಂಡರು. ಹೀಗಾಗಿ ಬೆಂಗಳೂರಿನಲ್ಲಿ ಅವರ ಪ್ರವಚನಗಳಿಗೆ ಹೋಗುವುದು ಸಾಮಾನ್ಯವಾಗಿತ್ತು. ಜತೆಗೆ ಆಗಾಗ ಉಡುಪಿಗೂ ತೆರಳಿ ಬನ್ನಂಜೆ ಗೋವಿಂದಾಚಾರ್ಯ ಗುರುಗಳನ್ನು ಅವರು ಭೇಟಿಯಾಗುತ್ತಿದ್ದರು. ಇನ್ನು ಕ್ಯಾಸೆಟ್​ಗಳಲ್ಲಿ ಪ್ರವಚನಗಳನ್ನು ಯಾವಾಗಲೂ ಕೇಳುತ್ತಿದ್ದರಂತೆ. ವಿಷ್ಣುವರ್ಧನ್ ಗುರುಗಳಿಂದ ಎಷ್ಟು ಮಟ್ಟಿಗೆ ಪ್ರಭಾವಿತರಾಗಿದ್ದರೆಂದರೆ ಚಿತ್ರರಂಗಕ್ಕೆ ಗುಡ್​ಬೈ ಹೇಳಿ ಉಡುಪಿಗೆ ತೆರಳಿ ಅಧ್ಯಾತ್ಮ, ಧ್ಯಾನಕ್ಕೆ ಜೀವನ ಮೀಸಲಿಡಬೇಕು ಎಂದು ಸಹ ಅವರು ಆಲೋಚಿಸಿದ್ದರಂತೆ.

ಧ್ಯಾನ, ಅಧ್ಯಾತ್ಮದತ್ತ ಒಲವು

ವಯಸ್ಸಾದಂತೆ, ಜೀವನಾನುಭವ ಹೆಚ್ಚಿದಂತೆ ವಿಷ್ಣುವರ್ಧನ್​ರ ಒಲವು ಅಧ್ಯಾತ್ಮದತ್ತ ತಿರುಗಿತು. ‘ದೇಹಕ್ಕೂ ವ್ಯಾಯಾಮ ಬೇಕು, ಹಾಗೇ ಮನಸ್ಸಿಗೂ ವ್ಯಾಯಾಮ ಬೇಕು. ಹೀಗಾಗಿ ಪ್ರಾಣಾಯಾಮ, ಯೋಗ, ಧ್ಯಾನ ಮನಸ್ಸಿಗೆ ವ್ಯಾಯಾಮ ಮಾಡಿಸುವ ಸಾಧನಗಳು’ ಎಂದಿದ್ದರು. ವಿಷ್ಣುವರ್ಧನ್ ಪ್ರಕಾರ ಅಧ್ಯಾತ್ಮ ಅಂದರೆ ಭೌತಿಕ ರಚನೆಗೆ ಅಂಟಿಕೊಳ್ಳುವುದಲ್ಲ. ಬದಲಾಗಿ ಪ್ರಕೃತಿ ಮತ್ತು ಪಂಚಭೂತಗಳಲ್ಲಿ ಒಂದಾಗುವುದು ಎಂದು ನಂಬಿದ್ದರು. ಈ ನಿಟ್ಟಿನಲ್ಲಿ ಭಗವದ್ಗೀತೆ, ಕುರಾನ್ ಸೇರಿ ಹಲವು ಆಧ್ಯಾತ್ಮಿಕ ಪುಸ್ತಕಗಳನ್ನು ಅವರು ಓದಿಕೊಂಡಿದ್ದರು. ಅಧ್ಯಾತ್ಮ ಅವರ ಮೇಲೆ ಎಷ್ಟು ಪರಿಣಾಮ ಬೀರಿತ್ತೆಂದರೆ, ಕೊನೆಯ ಕೆಲವು ವರ್ಷ ಅವರು ತಲೆಗೆ ಬಟ್ಟೆ ಸುತ್ತಿಕೊಂಡು, ಕುರ್ತಾ ಮತ್ತು ಪಂಚೆಯಲ್ಲೇ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದರು. ಅವರ ಪ್ರಕಾರ ಪ್ರಾಪಂಚಿಕ ಸುಖಗಳನ್ನು ತ್ಯಜಿಸಿ, ಅವುಗಳಿಂದ ಹೊರಬಂದು ಅಂತಿಮ ಸತ್ಯಾನ್ವೇಷಣೆಯೇ ಅಧ್ಯಾತ್ಮವಾಗಿತ್ತು.

ಈ ನಿಟ್ಟಿನಲ್ಲೇ ಅವರು ಸದಾ ಕಾಲ ಯೋಚಿಸುತ್ತಿದ್ದರು ಎನ್ನಲಾಗಿದೆ. ತಾವು ಗಳಿಸಿರುವ ಯಶಸ್ಸು, ಹೆಸರು, ಆಸ್ತಿ, ಅಂತಸ್ತು ಈ ಎಲ್ಲಕ್ಕಿಂತ ಸರಳ ಜೀವನ, ಮಾನಸಿಕ ನೆಮ್ಮದಿ ಮತ್ತು ಖುಷಿಗೆ ಅವರು ಹೆಚ್ಚು ಒತ್ತು ನೀಡುತ್ತಿದ್ದರು. ಡಾ. ರಾಜ ಕುಮಾರ್ ವಿಧಿವಶರಾದ ಬಳಿಕ, ಅವರ ಆತ್ಮದ ಜತೆಗೂ ಮಾತನಾಡುತ್ತಿರುತ್ತೇನೆ ಎಂದು ಆಪ್ತರ ಜತೆ ವಿಷ್ಣು ಹೇಳಿಕೊಂಡಿದ್ದರಂತೆ. ಭಗವಾನ್ ಶ್ರೀಕೃಷ್ಣನ ವ್ಯಕ್ತಿತ್ವವು ವಿಷ್ಣುವರ್ಧನ್​ರನ್ನು ತೀವ್ರವಾಗಿ ಸೆಳೆದಿತ್ತು. ಭಗವದ್ಗೀತೆಯಿಂದ ಅವರು ಸ್ಪೂರ್ತಿ ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net