

| ದೇವರಾಜ್ ಕನಕಪುರ ಬೆಂಗಳೂರು
ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯ ಮೌಲ್ಯಾಂಕನ ಮಾನ್ಯತಾ ಪರಿಷತ್ನಿಂದ (ನ್ಯಾಕ್) ಮಾನ್ಯತೆ ಪಡೆಯುವುದು ಕಡ್ಡಾಯವಾಗಿದ್ದರೂ ಕಾಲೇಜುಗಳಿರಲಿ, ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳೇ ಇನ್ನೂ ಮಾನ್ಯತೆ ಪಡೆದಿಲ್ಲ. ಇದು ಕಾಲೇಜುಗಳ ಮೂಲಸೌಕರ್ಯ, ಶಿಕ್ಷಣದ ಗುಣಮಟ್ಟವನ್ನು ಪ್ರಶ್ನೆ ಮಾಡುವಂತಾಗಿದೆ. ಏಕೆಂದರೆ, ನ್ಯಾಕ್ನಲ್ಲಿ ಉತ್ತಮ ಶ್ರೇಣಿ ಸಿಗುವುದು ಸುಲಭವಾದ ಮಾತಲ್ಲ. ಕಾಲೇಜಿನ ಕಾಂಪೌಂಡ್ನಿಂದ ಹಿಡಿದು ಕಾಲೇಜಿನ ಬೋಧಕರು ಪಡೆದುಕೊಂಡಿರುವ ಪಿಎಚ್.ಡಿವರೆಗೆ ಹಲವು ಸೌಲಭ್ಯಗಳನ್ನು ಪರಿಗಣನೆಗೆ ತೆಗೆದುಕೊಂಡು ಮೌಲ್ಯಾಂಕನ ಮಾಡಿಯೇ ಶ್ರೇಣಿಯನ್ನು ನೀಡಲಾಗುತ್ತದೆ.
ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ 16 ವಿಶ್ವವಿದ್ಯಾಲಯಗಳು ನ್ಯಾಕ್ ಮಾನ್ಯತೆ ಪಡೆಯದೆ ಇರುವುದು ಶಿಕ್ಷಣದ ಗುಣಮಟ್ಟವನ್ನು ಪ್ರಶ್ನೆ ಮಾಡುವಂತಾಗಿದೆ. ಇನ್ನೂ ಈ ವಿವಿಗಳ ವ್ಯಾಪ್ತಿಯಲ್ಲಿರುವ ಕಾಲೇಜುಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ನ್ಯಾಕ್ 2020-21ನೇ ಸಾಲಿನಲ್ಲಿ ಕರ್ನಾಟಕದಲ್ಲಿರುವ ಸರ್ಕಾರಿ ಪದವಿ ಕಾಲೇಜುಗಳ ನ್ಯಾಕ್ ಮಾನ್ಯತೆ ಸ್ಥಿತಿ ಮತ್ತು ಗುಣಮಟ್ಟ ಹೆಚ್ಚಿಸಲು ಶಿಫಾರಸು ಎಂಬ ವರದಿ ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿ ಈ ಅಂಶಗಳನ್ನು ತಿಳಿಸಿದೆ.
ರಾಜ್ಯದಲ್ಲಿ ಸಾಮಾನ್ಯ, ತಾಂತ್ರಿಕ ಶಿಕ್ಷಣ, ವೈದ್ಯಕೀಯ, ಕೃಷಿ ಸೇರಿದಂತೆ 28 ವಿಶ್ವವಿದ್ಯಾಲಯಗಳ ಪೈಕಿ 16 ವಿಶ್ವವಿದ್ಯಾಲಯಗಳು ಇನ್ನೂ ಮಾನ್ಯತೆ ಪಡೆದಿಲ್ಲ ಎಂಬುದನ್ನು ನ್ಯಾಕ್ ರೂಪಿಸಿರುವ ವರದಿಯಿಂದ ತಿಳಿದುಬಂದಿದೆ. ಈ ಪೈಕಿ ಕೆಲವು ವಿಶ್ವವಿದ್ಯಾಲಯಗಳು ನ್ಯಾಕ್ ಮಾನ್ಯತೆ ಪಡೆದುಕೊಳ್ಳುವ ಸಿದ್ಧತೆಯಲ್ಲಿ ತೊಡಗಿವೆ. ಕೆಲವು ಹೊಸ ವಿವಿಗಳಾಗಿದ್ದು, ಸದ್ಯಕ್ಕೆ ನ್ಯಾಕ್ ಮಾನ್ಯತೆ ಪಡೆಯಲು ಅನರ್ಹವಾಗಿವೆ.
ನ್ಯಾಕ್ ಮಾನ್ಯತೆ ಕಡ್ಡಾಯ: 16 ವಿವಿಗಳು ಮಾನ್ಯತೆ ಪಡೆದಿಲ್ಲ ಎಂದು ನ್ಯಾಕ್ ವರದಿ ತಿಳಿಸಿದೆ. 1990ರಲ್ಲೇ ವಿವಿಗಳು ಆರಂಭವಾಗಿದ್ದರೂ ಮಾನ್ಯತೆ ಪಡೆಯದಿರುವುದು ದುರಂತ. ಮೊದಲು ನ್ಯಾಕ್ ಮಾನ್ಯತೆ ಕಡ್ಡಾಯವಾಗಿರಲಿಲ್ಲ. 2013ರಲ್ಲಿ ಕೇಂದ್ರ ಉನ್ನತ ಶಿಕ್ಷಣ ಇಲಾಖೆ ಕಡ್ಡಾಯ ಮಾಡಿದೆ.
ನ್ಯಾಕ್ ಮಾನ್ಯತೆ ಪಡೆಯುವುದು ಕಡ್ಡಾಯವಾಗಿದೆ. ವಿಟಿಯು ಇದಕ್ಕಾಗಿ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ನ್ಯಾಕ್ ಸಮಿತಿ ಪರಿಶೀಲನೆ ಮಾಡಿ ಆನಂತರದಲ್ಲಿ ಶ್ರೇಣಿ ನೀಡಲಿದೆ. ಉತ್ತಮ ಶ್ರೇಣಿ ಪಡೆಯುವ ಪ್ರಯತ್ನದಲ್ಲಿದ್ದೇವೆ.
|ಎ.ಎಸ್.ದೇಶಪಾಂಡೆ ಕುಲಸಚಿವ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)