

ಮೂಡಿಗೆರೆ: ಗೌಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 16.06 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಅಧ್ಯಕ್ಷ ಜಿ.ಕೆ.ದಿವಾಕರ್ ತಿಳಿಸಿದರು.
ಶುಕ್ರವಾರ ಸಹಕಾರ ಸಂಘದ ಆವರಣದಲ್ಲಿ ನಡೆದ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂಘ ಪ್ರಸ್ತುತ 1.82 ಕೋಟಿ ರೂ. ಠೇವಣಿ ಹೊಂದಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂಘದ ವ್ಯಾಪ್ತಿಯ ರೈತರಿಗೆ 10.53 ಕೋಟಿ ರೂ. ಸಾಲ ವಿತರಿಸಲಾಗಿದೆ . ಸಂಘದ ಸದಸ್ಯರಿಗೆ ಗೊಬ್ಬರ ವಿತರಣೆ, ಪಡಿತರ ವಿತರಣೆ, ಹಿಟ್ಟಿನ ಗಿರಣಿ ಸೇವೆ ನೀಡಲಾಗುತ್ತಿದೆ. ಕಳೆದ ಸಾಲಿನಲ್ಲಿ ಊರುಬಗೆಯಲ್ಲಿ ಸಂಘದಿಂದ ಗೋದಾಮು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದಲ್ಲಿ ನಿರಂತರ ವ್ಯವಹಾರ ಮಾಡಿದರೆ ಸಂಘದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಸಂಘದಿಂದ ಕೃಷಿಕರಿಗೆ ವಿವಿಧ ಕೃಷಿ ಪರಿಕರಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದರು.
ದ್ವಿತೀಯ ಪಿಯುಸಿ ಯಲ್ಲಿ ಉನ್ನತ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ನೂತನ ಅಸಿಸ್ಟೆಂಟ್ ರಿಜಿಸ್ಟ್ರಾರ್ ರಾಮನಗೌಡ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಎಚ್.ಜಿ.ವೆಂಕಟೇಶ್, ನಿರ್ದೇಶಕರಾದ ಬಿ.ಪಿ.ಕೃಷ್ಣೇಗೌಡ, ಎಂ.ಎಸ್.ಸಂತೋಷ್, ಕೆ.ಬಿ.ಚಂದ್ರೇಗೌಡ, ಬಿ.ಬಿ.ವಿನೇಶ್, ಜಯಮ್ಮ, ಸುಮಾ ರವಿ, ಅರುಣ್‌ಕುಮಾರ್, ಲಿಂಗಪ್ಪ, ರಮೇಶ್, ಎಸ್.ಜೆ.ನಿತಿನ್, ಸಿಇಒ ಎಸ್.ಆರ್.ರವೀಂದ್ರ ಇದ್ದರು.