ಜಿಲ್ಲೆಗೆ 16 ಕೆಪಿಎಸ್​ ಮಂಜೂರು

kps story
ಕೋಲಾರ ಜಿಲ್ಲೆಯ ಮಾಸ್ತಿ ಗ್ರಾಮದಲ್ಲಿನ ಕೆಪಿಎಸ್​ ಶಾಲೆ.
Published on

* ಕಿರುವಾರ ಎಸ್​.ಸುದರ್ಶನ್​ ಕೋಲಾರ

ಪೂರ್ವ ಪ್ರಾಥಮಿಕ ಹಂತದಿಂದ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ಕಲ್ಪಿಸಲು ಸರ್ಕಾರ ಕ್ರಮವಹಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಜಿಲ್ಲೆಯಲ್ಲಿ ಹೆಚ್ಚುವರಿ 16 ಕರ್ನಾಟಕ ಪಬ್ಲಿಕ್​ ಶಾಲೆಗಳು ಪ್ರಾರಂಭವಾಗಲಿವೆ.

ಕಳೆದ ಬಜೆಟ್​ನಲ್ಲಿ ರಾಜ್ಯಾದ್ಯಂತ 500 ಕೆಪಿಎಸ್​ ಶಾಲೆಗಳನ್ನು ಪ್ರಾರಂಭ ಮಾಡಲು ಸರ್ಕಾರ ಘೋಷಣೆ ಮಾಡಿತ್ತು, ಅದರಂತೆ ಜಿಲ್ಲೆಗೆ 16 ಶಾಲೆಗಳಿಗೆ ಅನುಮತಿ ನೀಡಿದ್ದು, ಆ ಪೈಕಿ ಕೆಜಿಎ್​, ಕೋಲಾರ, ಬಂಗಾರಪೇಟೆ, ಮಾಲೂರು ತಾಲೂಕಿಗೆ ತಲಾ 3 ಹಾಗೂ ಮುಳಬಾಗಿಲು, ಶ್ರೀನಿವಾಸಪುರ ತಾಲೂಕಿಗೆ ತಲಾ 2 ಕೆಪಿಎಸ್​ ಶಾಲೆಗಳನ್ನು ಮಂಜೂರು ಮಾಡಿದೆ. ತಾಲೂಕು ಮತ್ತು ಹೋಬಳಿ ಕೇಂದ್ರಕ್ಕೆ ಒಂದರಂತೆ ಘೋಷಿಸಿದ್ದು, ಆಯ್ದ ಶಾಲೆಗಳನ್ನು ಉನ್ನತಿಕರಿಸಿ ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸಲು ಮುಂದಾಗಿದೆ.

ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳದ ಮಿತಿಯು 2025-&26ನೇ ಸಾಲಿನಿಂದಲೇ ಜಾರಿಗೆ ಬರಲಿದೆ. ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಈ ಸಂಬಂಧ ಈಗಾಗಲೇ ಸುತ್ತೋಲೆ ಹೊರಡಿಸಿ ಆದೇಶಿಸಿದ್ದಾರೆ. ಶಾಲಾ ಆವರಣದಲ್ಲಿ ಲಭ್ಯವಿರುವ ಕಟ್ಟಡಗಳು, ಇನ್ನಿತರ ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳ ದಾಖಲಾತಿ ಹಾಗೂ ವಿದ್ಯಾಭ್ಯಾಸಕ್ಕಾಗಿ ಎಲ್ಲ ರೀತಿಯ ಅವಕಾಶ ಕಲ್ಪಿಸಬೇಕು ಎಂದು ಷರತ್ತು ವಿಧಿಸಿದ್ದಾರೆ.

ಏಷ್ಯನ್​ ಡೆವಲಪ್​ಮೆಂಟ್​ ಬ್ಯಾಂಕ್​ (ಎಡಿಬಿ) ಸಹಯೋಗದೊಂದಿಗೆ ಆಯ್ದ ಗ್ರಾಮಗಳಲ್ಲಿನ ಶಾಲೆಗಳನ್ನು ಉನ್ನತಿಕರಿಸುವ ಜತೆಗೆ ಅಭಿವೃದ್ಧಿಪಡಿಸಲು ಕ್ರಮವಹಿಸಿದ್ದು, ಪ್ರತಿ ಶಾಲೆಗೆ 4 ಕೋಟಿ ರೂ. ಮಂಜೂರು ಮಾಡಿದ್ದು, ಸದರಿ ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು. ಉಚಿತ ಸಾರಿಗೆ ವ್ಯವಸ್ಥೆಯೂ ಇರಲಿದೆ.

ಪ್ರಸ್ತುತ ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ದಾಖಲಾತಿ ಮಿತಿ ಶೇ.30ರಷ್ಟಿದ್ದು, ಇದನ್ನು ಶೇ.40ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ಅದೇ ರೀತಿ ಪ್ರಾಥಮಿಕ ತರಗತಿಗಳಲ್ಲಿ 30 ಮಕ್ಕಳಿದ್ದು, ಈ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲಾಗುತ್ತದೆ. ಮೂಲ ಸೌಕರ್ಯ ಹಾಗೂ ಶಿಕ್ಷಕರ ಲಭ್ಯತೆ ನೋಡಿ ಸಾಧ್ಯವಾದಲ್ಲಿ 60 ಮಕ್ಕಳವರೆಗೂ ಅನುಮತಿ ನೀಡಲು ಇಲಾಖೆಯು ಚಿಂತನೆ ನಡೆಸಿದೆ.

ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ವಿದ್ಯಾಭ್ಯಾಸ ಕೊಡಿಸಲಾಗದಂತಹ ಪಾಲಕರಿದ್ದಾರೆ. ಅಂತಹವರು ಕೆಪಿಎಸ್​ ಶಾಲೆಗಳಗೆ ತಮ್ಮ ಮಕ್ಕಳನ್ನು ಸೇರಿಸಿ ಪಿಯುಸಿ ತನಕ ಅಂಗ್ಲ ಮಾಧ್ಯಮ ಶಿಕ್ಷಣ ಕೊಡಿಸಲು ಅನುಕೂಲವಾಗಲಿದೆ. ಸರ್ಕಾರಿ ಶಾಲೆಗಳ ಮಕ್ಕಳ ದಾಖಲಾತಿ ಹೆಚ್ಚಿಸಲು ಸರ್ಕಾರದ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

* ತಾರತಮ್ಯ ಆರೋಪ

ಕಾಂಗ್ರೆಸ್​ ಶಾಸಕರಿರುವ ಕೆಜಿಎ್​, ಬಂಗಾರಪೇಟೆ, ಮಾಲೂರು ಹಾಗೂ ಕೋಲಾರ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಮೂರು ಶಾಲೆಗಳು ಹಾಗೂ ಜೆಡಿಎಸ್​ ಶಾಸಕರಿರುವ ಮುಳಬಾಗಿಲು, ಶ್ರೀನಿವಾಸಪುರ ಕ್ಷೇತ್ರಗಳಿಗೆ ತಲಾ ಎರಡು ಶಾಲೆಗಳನ್ನು ಉನ್ನತಿಕರಿಸಿ ಕೆಪಿಎಸ್​ ಶಾಲೆ ಪ್ರಾರಂಭಿಸಲಾಗುವುದು. ಮಕ್ಕಳಿಗೆ ಶಿಕ್ಷಣ ಕಲ್ಪಿಸುವ ವಿಚಾರದಲ್ಲೂ ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ಒಂದೇ ಸಮನೆ ನೋಡಬೇಕಿತ್ತು, ಆದರೆ ಕಾಂಗ್ರೆಸ್​ ಶಾಸಕರಿರುವ ಕ್ಷೇತ್ರಗಳಿಗೆ ಬೆಣ್ಣೆ, ಜೆಡಿಎಸ್​ ಶಾಸಕರಿರುವ ಕ್ಷೇತ್ರಗಳಿಗೆ ಸುಣ್ಣ ಇಟ್ಟು ತಾರತಮ್ಯ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

* ಎಲ್ಲೆಲ್ಲಿ ಕೆಪಿಎಸ್​ ಪ್ರಾರಂಭ?

ತಾಲೂಕು ಗ್ರಾಮಗಳು

ಬಂಗಾರಪೇಟೆ ಕ್ಯಾಸಂಬಳ್ಳಿ ್ರೌಢ ಶಾಲೆ, ದೊಡ್ಡೂರು ಪ್ರೌಢ ಶಾಲೆ, ಬಂಗಾರಪೇಟೆ ಬಾಲಕರ ಹಾಗೂ ಬಾಲಕಿಯರ ಪದವಿ ಕಾಲೇಜು

ಕೆಜಿಫ್ ​ ಕೆಜಿಫ್ ​ ಬಾಲಕಿಯರ, ಬಾಲಕರ ಪಿಯು ಕಾಲೇಜು, ರಾಮಸಾಗರ ಪ್ರೌಢ ಶಾಲೆ, ಸರ್ಕಾರಿ ಪ್ರೌಢ ಶಾಲೆ ಕ್ಯಾಸಂಬಳ್ಳಿ

ಕೋಲಾರ ಬೆಗ್ಲಿ ಹೊಸಹಳ್ಳಿ ಸರ್ಕಾರಿ ಪ್ರೌಢ ಶಾಲೆ, ವೇಮಗಲ್​ ಸರ್ಕಾರಿ ಪಿಯು ಕಾಲೇಜು, ಕೋಲಾರ ಸರ್ಕಾರಿ ಬಾಲಕಿಯರ ಕಾಲೇಜು

ಮಾಲೂರು ಮಾಲೂರು, ಟೇಕಲ್​ ಸರ್ಕಾರಿ ಜೂನಿಯರ್​ ಕಾಲೇಜು, ತೊರಲಕ್ಕಿ ಪ್ರೌಢ ಶಾಲೆ

ಮುಳಬಾಗಿಲು ಮುಳಬಾಗಿಲು ಸರ್ಕಾರಿ ಜೂನಿಯರ್​ ಕಾಲೇಜು, ಕುರುಡಮಲೆ ಸರ್ಕಾರಿ ಪ್ರೌಢ ಶಾಲೆ

ಶ್ರೀನಿವಾಸಪುರ ರಾಯಲ್ಪಾಡು ಸರ್ಕಾರಿ ಜೂನಿಯರ್​ ಕಾಲೇಜು, ಶ್ರೀನಿವಾಸಪುರ ಸರ್ಕಾರಿ ಬಾಲಕಿಯರ ಕಾಲೇಜು.

ಪ್ರಮುಖ ಉದ್ದೇಶಗಳು..

* ಮಕ್ಕಳು ಶಾಲೆ ಬಿಟ್ಟು ಹೋಗದಂತೆ ಕ್ರಮವಹಿಸುವುದು.

* ಶಾಲಾ ದಾಖಲಾತಿ ಹೆಚ್ಚಿಸುವುದು.

* ಗುಣಾತ್ಮಕ ಶಿಕ್ಷಣ ಕಲ್ಪಿಸಿವುದು.

* ಆಯ್ದ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮ

ಕೋಟ್​...

ಬಡ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಹೆಚ್ಚುವರಿ ಶಾಲೆಗಳನ್ನು ಘೋಷಣೆ ಮಾಡಿತ್ತು, ಇದಕ್ಕೆ ಸರ್ಕಾರವು ಅನುಮೋದನೆ ನೀಡಿದ್ದು, ಶಿಕ್ಷಣದಿಂದ ವಂಚನೆಯಾಗಬಾರದು ಎಂದು ಸರ್ಕಾರ ಕ್ರಮವಹಿಸಿ, ಕೆಪಿಎಸ್​ ಶಾಲೆ ಪ್ರಾರಂಭಕ್ಕೆ ಕ್ರಮವಹಿಸಿದೆ.

- ಕೆ.ವೈ.ನಂಜೇಗೌಡ, ಶಾಸಕ, ಮಾಲೂರು

ಕೋಟ್​...

ಸರ್ಕಾರು ಶಾಲೆಗಳ ವಿಚಾರವೇ ಅಲ್ಲ, ಪ್ರತಿ ವಿಚಾರದಲ್ಲೂ ತಾರತಮ್ಯ ಮಾಡಿಕೊಂಡು ಬರುತ್ತಿದೆ. ಹೊಸದಾಗಿ ಆಯ್ಕೆಯಾಗಿರುವ 78 ಶಾಸಕರ ಆಸೆ ಅಕಾಂೆಗಳಿಗೆ ತಣ್ಣೀರು ಎರಚಿ ಶಾಪವಾಗಿ ಪರಿವರ್ತನೆಯಾಗಿದೆ, ಈ ಶಾಪವು ಸರ್ಕಾರಕ್ಕೆ ತಟ್ಟುವಂತಾಗಲಿ.

- ಸಮೃದ್ಧಿ ಮಂಜುನಾಥ್​, ಶಾಸಕ, ಮುಳಬಾಗಿಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net