ಕೇಂದ್ರ ಬಜೆಟ್​ 2020: ಅನ್ನದಾತನ ಆದಾಯಕ್ಕೆ ಹದಿನಾರು ಸೂತ್ರ

FARMER
Published on

ಕೃಷಿರಂಗದ ಬೆಳವಣಿಗೆ ಹೆಚ್ಚಿಸಲು ಇಚ್ಛಾಶಕ್ತಿ ತೋರಿರುವ ಸರ್ಕಾರ ರೈತರಿಗೆ ನೇರ ಲಾಭವಾಗುವಂಥ ಮಹತ್ವದ ಘೋಷಣೆಗಳನ್ನು ಮಾಡಿದೆ. ಸಾವಯವ ಕೃಷಿಯ ಮಂತ್ರ ಈ ಬಾರಿಯೂ ಅನುರಣಿಸಿದ್ದು, ರೈತರ ಗದ್ದೆಗಳಿಗೆ ಸೋಲಾರ್ ಪಂಪ್​ಸೆಟ್​ನ ಬಲ ಸಿಗಲಿದೆ. ಅಷ್ಟೇ ಅಲ್ಲ, ಕೃಷಿಕರ ಖಾಲಿ ಅಥವಾ ಬರಡು ಜಮೀನಿನಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಅನುವು ಮಾಡಿಕೊಡಲಿದ್ದು, ಈ ಮೂಲಕ ರೈತರ ಆದಾಯಕ್ಕೆ ಮತ್ತೊಂದು ಮಾರ್ಗ ತೆರೆದುಕೊಳ್ಳಲಿದೆ.

ರಾಷ್ಟ್ರೀಯ ಉತ್ಪನ್ನ, ಉದ್ಯೋಗ ಸೃಜನೆಯಲ್ಲಿ ಬಹುದೊಡ್ಡ ಪಾಲು ಕೃಷಿ ಕ್ಷೇತ್ರದ್ದು. ಅದಕ್ಕೆ ತಕ್ಕಂತೆ ಮಾರುಕಟ್ಟೆ ಆಧಾರಿತ ಕೃಷಿ ವಿಸ್ತರಣಾ ಚಟುವಟಿಕೆಗಳಿಗೆ ಒತ್ತು ನೀಡಿ, ತಾತ್ಪೂರ್ತಿಕ ಲಾಭಕ್ಕಿಂತ ದೀರ್ಘಾವಧಿ ಅನುಕೂಲತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದ್ಯತೆ ನೀಡಿರುವುದು ಈ ಬಜೆಟ್​ನ ಮುಖ್ಯಾಂಶ.

ಅನ್ನದಾತ ಶಕ್ತಿದಾತನೂ (ವಿದ್ಯುತ್​ದಾತ) ಆಗಲೆಂದು ‘ಪ್ರಧಾನಮಂತ್ರಿ ಕುಸುಮ್ ಯೋಜನೆ’ಯಡಿ 20 ಲಕ್ಷ ಸೌರಶಕ್ತಿ ಪಂಪ್​ಸೆಟ್ ವಿತರಣೆ, ಸಮಗ್ರ ಮತ್ತು ಶೂನ್ಯ ಬಂಡವಾಳ ಕೃಷಿ ಪದ್ಧತಿಗೆ ಉತ್ತೇಜನ, ಕೃಷಿ ಉತ್ಪನ್ನಗಳ ದಾಸ್ತಾನಿಗಾಗಿ ತಾಲೂಕಿಗೊಂದು ಉಗ್ರಾಣ ಜತೆಗೆ ಅಡಮಾನ ಸಾಲ ಸೌಲಭ್ಯ, ಆನ್​ಲೈನ್ ವ್ಯಾಪಾರಕ್ಕಾಗಿ ರಾಷ್ಟ್ರೀಯ ಇ-ಮಾರುಕಟ್ಟೆ, 2020-21ನೇ ಸಾಲಿಗೆ 15 ಲಕ್ಷ ಕೋಟಿ ರೂ. ಕೃಷಿ ಸಾಲ ನೀಡುವ ಗುರಿಯಿಟ್ಟುಕೊಳ್ಳಲಾಗಿದೆ.

ನಿರೀಕ್ಷೆ ಹುಸಿ: ಮಾಹಿತಿ, ಆಹಾರ, ಉದ್ಯೋಗ ಖಾತರಿ ರೀತಿಯಲ್ಲಿ ಬೆಲೆ ಖಾತರಿ ನಿರೀಕ್ಷೆ ಹುಸಿಯಾಗಿದೆ. ಉತ್ಪಾದನಾ ವೆಚ್ಚಕ್ಕೆ ಒಂದೂವರೆ ಪಟ್ಟು ಬೆಲೆ ನಿಗದಿಪಡಿಸಬೇಕೆಂಬ ಸ್ವಾಮಿನಾಥನ್ ಆಯೋಗದ ವರದಿ ಜಾರಿ ಬೇಡಿಕೆ ದಶಕಗಳಷ್ಟು ಹಳೆಯದು. ಈ ಮಧ್ಯೆ ಹೊಸ ಮಾರುಕಟ್ಟೆಗಳ ಅನ್ವೇಷಣೆಗೆ ತಕ್ಕಂತೆ ಸಾರಿಗೆ, ನೀರಾವರಿ ವ್ಯವಸ್ಥೆ ಅಭಿವೃದ್ಧಿ, ಉತ್ಪಾದನೆಗೆ ಉತ್ತೇಜನ ನೀಡಲಾಗಿದೆ. ಅಲ್ಲದೆ ನಿಸರ್ಗದ ಹೊಯ್ದಾಟ, ಬದಲಾದ ಜೀವನಶೈಲಿಯಿಂದಾಗಿ ವ್ಯವಸಾಯವೆಂದರೆ ಜೂಜಾಟದ ಬದುಕು ಎಂಬ ನಿರಾಶಭಾವ ಕಿತ್ತು ಹಾಕುವ ಪ್ರಯತ್ನಕ್ಕೂ ಕೈ ಹಾಕಿದೆ.

ಬಜೆಟ್ ಗಾತ್ರ: ಕೃಷಿ ಸಂಬಂಧಿತ ಚಟುವಟಿಕೆಗೆ 1.60 ಲಕ್ಷ ಕೋಟಿ ರೂ. ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ಗೆ 1.23 ಲಕ್ಷ ಕೋಟಿ ಸೇರಿ ಒಟ್ಟು 2.83 ಲಕ್ಷ ಕೋಟಿ ರೂ. ನಿಗದಿಪಡಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 10ರಷ್ಟು ಮೊತ್ತ ಏರಿಕೆಯಾಗಿದೆ.

ಮಣ್ಣಿನ ಆರೋಗ್ಯ ಕಾಳಜಿ

ಅತಿಯಾದ ರಸಗೊಬ್ಬರ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಳಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ತಮಿಳುನಾಡಿನ ಖ್ಯಾತ ಸಂತಕವಿ ಅವ್ಯಯಾರ್ ಅವರ ಕಾವ್ಯದ ‘ಭೂಮಿ ತಿರುತ್ತಿ ಉನ್’ (ಭೂಮಿ ಬಗ್ಗೆ ಕಾಳಜಿವಹಿಸು) ಸಾಲನ್ನು ಪ್ರಸ್ತಾಪಿಸಿದರು. ‘ಭೂಮಿಯನ್ನು ಪ್ರೀತಿಸಿದರೆ ನಿನಗದು ಆಪ್ತವಾಗುತ್ತದೆ’ ಎಂಬ ಸಂದೇಶ ನೀಡಿ, ರೈತರು ಭೂಮಿಯನ್ನು ಪ್ರೀತಿಸಬೇಕು ಎಂದರು. ಜತೆಗೆ ರಸಗೊಬ್ಬರ ಬಳಕೆ ನಿಯಂತ್ರಣಕ್ಕಾಗಿ ಶೂನ್ಯ ಬಂಡವಾಳ ಕೃಷಿಗೆ ಮತ್ತಷ್ಟು ಉತ್ತೇಜನ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ. ಸಾವಯವ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕೊರಗು ನಿವಾರಿಸಲೆಂದು ರಾಷ್ಟ್ರೀಯ ಸಾವಯವ ಕೃಷಿ ಉತ್ಪನ್ನಗಳಿಗೆ ಆನ್​ಲೈನ್ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

ಸೌರಶಕ್ತಿಗೆ ರಾಜ್ಯದ ಪ್ರೇರಣೆ

ಅನ್ನದಾತ ವಿದ್ಯುತ್​ದಾತನೂ ಆಗಬೇಕೆಂಬ ಆಶಯವನ್ನು ಬಜೆಟ್ ವ್ಯಕ್ತಪಡಿಸಿದ್ದು, ಕರ್ನಾಟಕದ ಸೌರಶಕ್ತಿ ನೀತಿಯೂ ಸ್ಪೂರ್ತಿ ನೀಡಿದೆ ಎಂಬುದು ವಿಶೇಷ. ಬರಡು, ಪಾಳು ಬಿದ್ದ ಭೂಮಿಯಲ್ಲಿ ಸೌರಶಕ್ತಿ ಆಧರಿತ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಹಾಗೂ ಉತ್ಪಾದಿತ ವಿದ್ಯುತ್ ಮಾರಾಟಕ್ಕೆ ಉತ್ತೇಜಿಸುವುದಾಗಿ ಘೋಷಿಸಲಾಗಿದೆ. ಜತೆಗೆ ಡಿಸೇಲ್ ಬಳಕೆ ತಪ್ಪಿಸಿ ರೈತರು ಸ್ವಾವಲಂಬಿಗಳಾಗಲೆಂದು ‘ಪ್ರಧಾನಮಂತ್ರಿ ಕುಸುಮ್ ಯೋಜನೆ’ಯಡಿ 20 ಲಕ್ಷ ಸೌರಶಕ್ತಿ ಪಂಪ್​ಸೆಟ್​ಗಳ ವಿತರಣೆಗೆ ನಿರ್ಧರಿಸಿದ್ದು, ಹೆಚ್ಚುವರಿಯಾಗಿ 15 ಲಕ್ಷ ರೈತರಿಗೆ ಸೌರಶಕ್ತಿ ಪಂಪ್​ಸೆಟ್​ಗೆ ನೆರವು ನೀಡಲಿದೆ. ಸಮಗ್ರ ಕೃಷಿ ಪದ್ಧತಿ, ಪರಂಪರಾಗತ ಕೃಷಿಗೆ ಪ್ರೋತ್ಸಾಹ, 2022ರ ವೇಳೆಗೆ ರೈತರ ಆದಾಯ ದ್ವಿಗುಣ, ಕೃಷಿ ಉತ್ಪನ್ನಗಳ ಖರೀದಿ, ಕೃಷಿ ಯಾಂತ್ರೀಕರಣ, ದಾಸ್ತಾನು, ಸಾಗಣೆ ಹಾಗೂ ಸಾಲದ ವ್ಯವಸ್ಥೆ, ಸುಸ್ಥಿರ ಬೆಳೆ ಪದ್ಧತಿ ಸಾಧಿಸುವ ಅಭಿಲಾಷೆಯನ್ನು ಪುನರುಚ್ಚರಿಸಿದ್ದಾರೆ.

ಒಂದು ಜಿಲ್ಲೆ ಒಂದು ಬೆಳೆ

ಆಹಾರಧಾನ್ಯ ಉತ್ಪಾದನೆಯ ಪ್ರಮಾಣವನ್ನು ತೋಟಗಾರಿಕಾ ಕ್ಷೇತ್ರ (ಪ್ರಸಕ್ತ ವರ್ಷ 285 ದಶಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯ, 341 ದಶಲಕ್ಷ ಮೆಟ್ರಿಕ್ ತೋಟಗಾರಿಕೆ ಉತ್ಪನ್ನಗಳ ಉತ್ಪಾದನೆ ಅಂದಾಜಿದೆ) ಹಿಗ್ಗಿಸಿದೆ. ಇದರಿಂದಾಗಿ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ದಿಢೀರ್ ಬೆಲೆ ಕುಸಿತ, ಸಂಗ್ರಹಣೆಗೆ ಸೂಕ್ತ ಕೋಲ್ಡ್ ಸ್ಟೋರೇಜ್ ಇಲ್ಲದೆ ನಷ್ಟ ಇನ್ನಿತರ ಸಮಸ್ಯೆ ನಿವಾರಣೆಗೆ 1 ಜಿಲ್ಲೆ, 1 ಬೆಳೆ ಸೂತ್ರ ರೂಪಿಸಿದೆ.

ಕೃಷಿ ಕ್ರಿಯಾ ಯೋಜನೆ

1 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ಹಲವು ಮಹತ್ವದ ಕ್ರಮ ಘೋಷಿಸಿದ ಸಚಿವೆ ನಿರ್ಮಲಾ ಸೀತಾರಾಮನ್

2 2020-21ನೇ ಸಾಲಿಗೆ -ಠಿ; 15 ಲಕ್ಷ ಕೋಟಿ ಕೃಷಿ ಸಾಲದ ಗುರಿ ನಿಗದಿ ಮಾಡಿದ ಕೇಂದ್ರ ಸರ್ಕಾರ

3 ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಒಳಗೊಂಡು -ಠಿ; 2.83 ಲಕ್ಷ ಕೋಟಿ ನಿಗದಿ

4 ನೀರಿನ ಕೊರತೆ ಬಾಧಿತ 100 ಜಿಲ್ಲೆಗಳಿಗೆ ನೀರು ಪೂರೈಕೆ ಯೋಜನೆ, ದೇಶಾದ್ಯಂತ ಈ ಜಿಲ್ಲೆಗಳನ್ನು ಗುರುತಿಸಲು ಕ್ರಮ

5 ಫಸಲ್ ಭಿಮಾ ಯೋಜನೆಯಡಿ 6.11 ಕೋಟಿ ರೈತರಿಗೆ ಬೆಳೆವಿಮೆ ಯೋಜನೆ

6 ಪ್ರಧಾನಮಂತ್ರಿ ಕುಸುಮ್ ಯೋಜನೆಯಡಿ 20 ಲಕ್ಷ ರೈತರಿಗೆ ಸೌರಶಕ್ತಿ ಗ್ರಿಡ್ ಆಧಾರಿತ ಪಂಪ್​ಸೆಟ್​ಗಳ ವಿತರಣೆಗೆ ನೆರವು

7 ನಬಾರ್ಡ್ ಮರು ಹಣಕಾಸು ಯೋಜನೆ ವಿಸ್ತರಣೆ. ಸಹಕಾರ ಸಂಸ್ಥೆಗಳು, ಎನ್​ಬಿಎಫ್​ಸಿ ಕೃಷಿಸಾಲ ನೀಡುವಲ್ಲಿ ಸಕ್ರಿಯ

8 ರಸಗೊಬ್ಬರ ಬಳಕೆಯಲ್ಲಿ ನಿಯಂತ್ರಣ ಸಾಧಿಸಿ ಕೃಷಿಭೂಮಿ ಬಗ್ಗೆ ಕಾಳಜಿವಹಿಸಬೇಕು

9 ಬೀಜ ಸಂರಕ್ಷಣೆಗೆ ಆಸಕ್ತಿವಹಿಸುವ ಸ್ವಸಹಾಯ ಸಂಘಗಳಿಗೆ ಧನಸಹಾಯ, ಯುವ ಮಹಿಳಾ ಉದ್ಯಮಿಗಳಿಗೆ ಮುದ್ರಾ ನೆರವು

10 ಆಹಾರ ಧಾನ್ಯಕ್ಕಿಂತ ತೋಟಗಾರಿಕೆ ಉತ್ಪನ್ನ ಜಾಸ್ತಿಯಾಗುತ್ತಿದೆ. ಹೀಗಾಗಿ ಇನ್ನು ಮುಂದೆ ಒಂದು ಜಿಲ್ಲೆ ಒಂದು ಉತ್ಪನ್ನ ಸೂತ್ರ

11 ಶೂನ್ಯ ಬಂಡವಾಳ ಕೃಷಿಗೆ ಆದ್ಯತೆ. ರಾಷ್ಟ್ರಮಟ್ಟದಲ್ಲಿ ಸಾವಯವ ಉತ್ಪನ್ನಗಳ ಆನ್​ಲೈನ್ ಮಾರಾಟಕ್ಕೆ ವ್ಯವಸ್ಥೆ

12 ಕೊಳೆಯುವ ಆಹಾರ ಪದಾರ್ಥಗಳ ತ್ವರಿತ ರವಾನೆಗೆ ‘ಕಿಸಾನ್ ರೈಲು’

13 ಈಶಾನ್ಯ ರಾಜ್ಯಗಳು ಹಾಗೂ ಗುಡ್ಡಗಾಡು ಪ್ರದೇಶಗಳ ಕೃಷಿ ಉತ್ಪನ್ನಗಳ ರಫ್ತಿಗೆ ‘ಕಿಸಾನ್ ಉಡಾನ್’

14 ನಬಾರ್ಡ್​ಗೆ ಕೃಷಿ ಉತ್ಪನ್ನಗಳ ದಾಸ್ತಾನು ಸ್ಥಳಗಳ ಮ್ಯಾಪಿಂಗ್ ಹಾಗೂ ಜಿಯೋ ಟ್ಯಾಗಿಂಗ್ ಜವಾಬ್ದಾರಿ

15 ಕೃಷಿ ಉತ್ಪನ್ನಗಳ ಸಂಗ್ರಹ ವ್ಯವಹಾರದ ರಸೀದಿಗಳು ಇ-ಸೇವೆಗೆ ಜೋಡಣೆ

16 ಕೃಷಿಭೂಮಿ ಗುತ್ತಿಗೆ, ಮಾರುಕಟ್ಟೆ, ಒಪ್ಪಂದ ಕೃಷಿ ಮಾದರಿ ಕಾನೂನು ಜಾರಿಗೊಳಿಸುವ ರಾಜ್ಯ ಸರ್ಕಾರಗಳಿಗೆ ಬೆಂಬಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net