

ಲಯನ್ಸ್ ಇಂಟರ್‌ನ್ಯಾಷನಲ್ ಮಲ್ಟಿಪಲ್ ಜಿಲ್ಲೆ 317, ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಹಾಗೂ ಡಾ.ಎಸ್.ವಿದ್ಯಾಶಂಕರ್ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಡಿ.15ರಂದು ಮಧ್ಯಾಹ್ನ 3.30ಕ್ಕೆ ಮಾನಸಗಂಗೋತ್ರಿ ಸೆನೆಟ್ ಸಭಾಂಗಣದಲ್ಲಿ ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ್ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಆಯೋಜಕ ಡಾ.ಎನ್. ಕೃಷ್ಣೇಗೌಡ ತಿಳಿಸಿದರು.
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಎಂಎಲ್ಸಿ ಎಚ್.ವಿಶ್ವನಾಥ್ ಭಾಗವಹಿಸಲಿದ್ದಾರೆ. ಇದೇ ವೇಳೆ 9 ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೂಲತಃ ಮಂಡ್ಯ ಜಿಲ್ಲೆಯವರಾದ ವಿದ್ಯಾಶಂಕರ್ 1991ರಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪ್ರಾಧ್ಯಾಪಕರಾಗಿ ವೃತ್ತಿ ಪ್ರಾರಂಭಿಸಿದರು. 28 ವರ್ಷಗಳ ಕಾಲ ಬೋಧನಾ ಅನುಭವ ಹಾಗೂ 15 ವರ್ಷ ಸಂಶೋಧನಾ ಅನುಭವ ಹೊಂದಿದ್ದಾರೆ. ಕಾಲೇಜು ದಿನಗಳಿಂದಲೂ ಹೋರಾಟದ ಗುಣ ಹೊಂದಿರುವ ಇವರು ಅನೇಕ ಶೈಕ್ಷಣಿಕ ಸಂಸ್ಥೆಗಳ ಹೋರಾಟದ ನೇತೃತ್ವ ವಹಿಸಿ, ಪ್ರಸ್ತುತ ವಿಟಿಯು ಕುಲಪತಿಯಾಗಿದ್ದಾರೆ. ಹೀಗಾಗಿ ಅವರನ್ನು ಅಭಿನಂದಿಸಲಾಗುತ್ತಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಡಿ.ರವಿಕುಮಾರ್, ಎಂ.ಸಿದ್ದೇಗೌಡ ಇದ್ದರು.