15ಕ್ಕೆ ಸೈನ್ಸ್ ಮೈದಾನದಲ್ಲಿ ಉದ್ಯೋಗ ಮೇಳ

selvamani
ಡಾ.ಆರ್.ಸೆಲ್ವಮಣಿ, ಶಿವಮೊಗ್ಗ ಜಿಲ್ಲಾಧಿಕಾರಿ
Published on

ಶಿವಮೊಗ್ಗ: ನಗರದ ಸೈನ್ಸ್ ಮೈದಾನದಲ್ಲಿ ಸೆ.15ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ 50ಕ್ಕೂ ಹೆಚ್ಚು ಹೆಸರಾಂತ ಕಂಪನಿಗಳು ಇದರಲ್ಲಿ ಭಾಗವಹಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ತಿಳಿಸಿದರು.

ಈ ಉದ್ಯೋಗ ಮೇಳದಲ್ಲಿ ಐದು ಸಾವಿರಕ್ಕೂ ಅಧಿಕ ವಿದ್ಯಾವಂತರಿಗೆ ಅವಕಾಶ ಲಭಿಸುವ ನಿರೀಕ್ಷೆಯಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ, ಜಿಲ್ಲಾಡಳಿತದ ಸಹಯೋಗದಲ್ಲಿ ಉದ್ಯೋಗ ಮೇಳ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಇಲ್ಲವೇ ಅನುತ್ತೀರ್ಣರಾದವರು, ಐಟಿಐ, ಡಿಪ್ಲೊಮಾ ಸೇರಿದಂತೆ ಎಲ್ಲ ರೀತಿಯ ಉನ್ನತ ಶಿಕ್ಷಣ ಪಡೆದ ಯುವಕರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶವಿದೆ. ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಮೇಳ ನಡೆಯುವ ದಿನದಂದು ಸ್ಥಳದಲ್ಲಿಯೇ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಸಾಫ್ಟ್‌ವೇರ್, ಆಟೋಮೊಬೈಲ್, ಫೌಂಡ್ರಿ, ರಿಟೇಲ್ ಫಾರ್ಮಸಿ, ಹಣಕಾಸು, ವಿಮೆ, ಗಾರ್ಮೆಂಟ್ಸ್ ಸೇರಿದಂತೆ 50ಕ್ಕೂ ಹೆಚ್ಚಿನ ಸ್ಥಳೀಯ ಮತ್ತು ರಾಜ್ಯ ಮಟ್ಟದ ಬೃಹತ್ ಕಂಪನಿಗಳು ಭಾಗವಹಿಸಲಿವೆ. ಸ್ವ ಉದ್ಯೋಗ ಕೈಗೊಳ್ಳ ಬಯಸುವವರೂ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ಉದ್ದಿಮೆ ಆರಂಭಿಸುವವರಿಗೆ ಬ್ಯಾಂಕ್‌ಗಳಿಂದ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆಯೂ ಇಲ್ಲಿ ಮಾಹಿತಿ ನೀಡಲಾಗುತ್ತದೆ. ನಮ್ಮ ಜಿಲ್ಲೆ ಮಾತ್ರವಲ್ಲದೆ ನೆರೆಯ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕೌಶಲಾಭಿವೃದ್ಧಿ ಇಲಾಖೆ ನಿರ್ದೇಶಕ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ ಮಾತನಾಡಿ, ಅತ್ಯಂತ ಕಡಿಮೆ ಶುಲ್ಕದಲ್ಲಿ ಅತ್ಯಾಧುನಿಕ ರೀತಿಯ ಎಲೆಕ್ಟ್ರಿಕ್ ವೆಹಿಕಲ್ ಮತ್ತು ರೋಬಾಟಿಕ್ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು 70 ಸಾವಿರ ಮಂದಿ ಐಟಿಐ ಮತ್ತು ಡಿಪ್ಲೊಮಾ ಶಿಕ್ಷಣ ಪಡೆಯಲು ಪ್ರವೇಶ ಪಡೆದಿದ್ದಾರೆ ಎಂದು ಇಲಾಖೆ ಪ್ರಗತಿ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net