

ನವದೆಹಲಿ: ಇಂದಿಗೆ 'ವಂದೇ ಮಾತರಂ' ಗೀತೆ ರಚನೆಯಾಗಿ ಬರೋಬ್ಬರಿ 150 ವರ್ಷಗಳೇ ಕಳೆದಿವೆ. ಈ ಹಾಡು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ದೇಶದ ಜನತೆಯನ್ನು ಒಗ್ಗೂಡಿಸುವಲ್ಲಿ ಮತ್ತು ಅವರಲ್ಲಿ ದೇಶಭಕ್ತಿಯನ್ನು ತುಂಬುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಭಾರತೀಯರು 'ವಂದೇ ಮಾತರಂ' ಎಂಬ ಘೋಷಣೆಯೊಂದಿಗೆ ಅಂದಿನ ಬ್ರಿಟಿಷ್ ಆಡಳಿತಗಾರರ ಬಗ್ಗೆ ತಮ್ಮ ತಿರಸ್ಕಾರವನ್ನು ತೋರಿದ್ದು ಇತಿಹಾಸ.
ಬಂಕಿಚಂದ್ರ ಚಟರ್ಜಿ ಅವರು ಬರೆದ 'ವಂದೇ ಮಾತರಂ' ಹಾಡಿನ 150ನೇ ವಾರ್ಷಿಕೋತ್ಸವವನ್ನು ಗುರುತಿಸಲು ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 'ವಂದೇ ಮಾತರಂ'ನ ಪೂರ್ಣ ಆವೃತ್ತಿಯ ಸಾಮೂಹಿಕ ಗಾಯನದಲ್ಲಿ ಮೋದಿ ಪಾಲ್ಗೊಂಡರು. ಇದೇ ವೇಳೆ ವೇದಿಕೆಯಲ್ಲಿ ಮಾತನಾಡಿದ ಪ್ರಧಾನಿ, ಕೇಂದ್ರ ಸರ್ಕಾರವು ವರ್ಷವಿಡೀ ಈ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಿದೆ. ಇಂದಿನಿಂದ ನವೆಂಬರ್ 7, 2026ರವರೆಗೆ ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಇದೇ ವೇಳೆ ಸ್ಮರಣಾರ್ಥ ಸ್ಟ್ಯಾಂಪ್ ಮತ್ತು ನಾಣ್ಯವನ್ನು ಅನಾವರಣಗೊಳಿಸಿದರು.
ಬ್ರಿಟಿಷ್ ಆಳ್ವಿಕೆಯಲ್ಲಿ, ಚಂದ್ರಶೇಖರ್ ಆಜಾದ್ ಅವರಿಗೆ ನ್ಯಾಯಾಲಯದಲ್ಲಿ 16 ಛಡಿ ಏಟುಗಳ ಶಿಕ್ಷೆ ವಿಧಿಸಿದಾಗ, ತಮ್ಮ ಮೇಲೆ ಬಿದ್ದ ಪ್ರತಿಯೊಂದು ಹೊಡೆತಕ್ಕೂ 'ವಂದೇ ಮಾತರಂ' ಎಂದು ಕೂಗಿದರು. ಈ ಕೂಗು ಸ್ವಾತಂತ್ರ್ಯ ಚಳವಳಿಯಲ್ಲಿ ಎಷ್ಟು ಪ್ರಭಾವಶಾಲಿಯಾಗಿತ್ತು ಎಂಬುದನ್ನು ತೋರಿಸುತ್ತದೆ,(ಏಜೆನ್ಸೀಸ್).