

ಮೊದಲೊಂದು ಕಾಲದಲ್ಲಿ ತುಂಬ ಫೇಮಸ್ ಆಗಿದ್ದ ಡಬಲ್ ಡೆಕ್ಕರ್ ಬಸ್ಗಳು ಈಗೀಗ ಎಲ್ಲ ನಗರಗಳಲ್ಲೂ ಬಹುತೇಕ ಕಣ್ಮರೆಯಾಗಿವೆ. ಮುಂಬೈನಲ್ಲಿ ಅಲ್ಲೊಂದು ಇಲ್ಲೊಂದು ಹಳೇ ಡಬಲ್ ಡೆಕ್ಕರ್ ಬಸ್ಗಳು ಕಾಣಿಸುತ್ತವೆ ಬಿಟ್ಟರೆ ಮತ್ಯಾವ ನಗರಗಳಲ್ಲೂ ಚಲಿಸುತ್ತಿರಲಿಲ್ಲ.
ಆದರೆ ಈಗ ಕೋಲ್ಕತ್ತ ರಸ್ತೆಗಳಲ್ಲಿ 15ವರ್ಷಗಳ ನಂತರ ಡಬಲ್ ಡೆಕ್ಕರ್ ಬಸ್ಗಳು ಕಾಣಿಸಿಕೊಳ್ಳುತ್ತಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಇಂದು ಎರಡು ಆಧುನಿಕ ಡಬಲ್ಡೆಕ್ಕರ್ ಬಸ್ಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ.
ನೀಲಿ ಮತ್ತು ಬಿಳಿ ಮಿಶ್ರಿತ ಪೇಂಟಿಂಗ್ ಉಳ್ಳ ಹೊಸ ಬಸ್ಗೆ ಒಂದೇ ಬಾಗಿಲು ಇದ್ದು, ಅದರಲ್ಲೇ ಪ್ರವೇಶ ಮತ್ತು ನಿರ್ಗಮನ ಮಾಡಬೇಕು. ಒಟ್ಟು 51 ಸೀಟ್ಗಳಿದ್ದು, ಅದರಲ್ಲಿ 16 ಮೇಲಿನ ಸೀಟ್ಗಳು. ಇನ್ನೊಂದು ವಿಶೇಷತೆಯೆಂದರೆ ಮೇಲಿನ ಡೆಕ್ಗೆ ಮೇಲ್ಛಾವಣಿ ಇಲ್ಲ. ತೆರೆದುಕೊಂಡೇ ಇದೆ. ಸಿಸಿಟಿವಿ ವ್ಯವಸ್ಥೆಯೂ ಇದೆ.
ಡಬಲ್ ಡೆಕ್ಕರ್ ಬಸ್ಗಳು ಅತಿಯಾದ ವಾಯುಮಾಲಿನ್ಯ ಉಂಟು ಮಾಡುತ್ತವೆ ಎಂಬ ಕಾರಣಕ್ಕೆ ಅವುಗಳ ಸಂಚಾರ ನಿರ್ಬಂಧಿಸಲಾಗಿತ್ತು. ಕೋಲ್ಕತ್ತದಲ್ಲಿ 2005ರಲ್ಲಿಯೇ ನಿಷೇಧ ಮಾಡಲಾಗಿತ್ತು. ಅದಾದ ಬಳಿಕ ಡಬಲ್ ಡೆಕ್ಕರ್ ಬಸ್ಗಳ ಸಂಚಾರ ಇರಲಿಲ್ಲ. ಇದೀಗ ಮತ್ತೆರಡು ಹೊಸ, ಆಧುನಿಕ ಬಸ್ಗಳು ರಾಜ್ಯಕ್ಕೆ ಕಾಲಿಟ್ಟಿವೆ. (ಏಜೆನ್ಸೀಸ್)