ಒಂದೇ ಹುಡುಗನ ಜತೆ 3 ಬಾರಿ ಬಾಲಕಿ ಎಸ್ಕೇಪ್​! ಪಾಲಕರನ್ನು ಪರಿ ಪರಿಯಾಗಿ ಬೇಡಿಕೊಂಡ ಪೊಲೀಸರು

Kerala Girl
Published on

ತೋಡುಪುಳ: ಪ್ರೀತಿಗೆ ಮನೆಯವರು ಒಪ್ಪಿಕೊಳ್ಳದಿದ್ದಕ್ಕೆ ಒಂದೇ ಹುಡುಗನ ಜೊತೆ ಅಪ್ರಾಪ್ತೆಯೊಬ್ಬರು ಮೂರು ಬಾರಿ ಓಡಿ ಹೋದ ಘಟನೆ ಕೇರಳದ ತೋಡುಪುಳದಲ್ಲಿ ನಡೆದಿದೆ.

14 ವರ್ಷದ ಮುಲ್ಲಮಟ್ಟಂ ಮೂಲದ ಬಾಲಕಿ, ಹುಡುಗನೊಂದಿಗೆ ಮತ್ತೆ ನಾಪತ್ತೆಯಾಗಿದ್ದಾಳೆ. ಪದೇಪದೆ ಈ ಘಟನೆ ನಡೆಯುತ್ತಿರುವುದು ಆ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳಿಗೆ ತಲೆನೋವು ತಂದಿದೆ.

ಈ ಹಿಂದೆ ಬಾಲಕಿ ತನ್ನ ಇಬ್ಬರು ಅಕ್ಕಂದಿರು ಮತ್ತು ಪಾಲಕರೊಂದಿಗೆ ಅಯವನದಲ್ಲಿ ನೆಲೆಸಿದ್ದಳು. ಒಂದು ದಿನ ದಿಢೀರನೇ ಆಕೆ ಕಾಣೆಯಾದಳು. ಬಳಿಕ ಪಾಲಕರು ಸಮೀಪದ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದರು. ಪೊಲೀಸರು ಹುಡುಕಾಟ ನಡೆಸಿ ಕೆಲವು ದಿನಗಳ ನಂತರ ಮುವಾಟ್ಟುಪುಳದ 15 ವರ್ಷದ ಹುಡುಗನೊಂದಿಗೆ ಹುಡುಗಿ ಇರುವುದನ್ನು ಪತ್ತೆಹಚ್ಚಿದರು. ಬಳಿಕ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ ಪಾಲಕರಿಗೆ ಒಪ್ಪಿಸಲಾಯಿತು.

ಈ ಘಟನೆಯ ಬಳಿಕ ಹುಡುಗಿಯ ಪಾಲಕರು ತಮ್ಮ ಮನೆಯನ್ನು ಮುಲ್ಲಮಟ್ಟಂಗೆ ಅನಿವಾರ್ಯವಾಗಿ ಸ್ಥಳಾಂತರಿಸಬೇಕಾಯಿತು. ಆದರೆ, ಬಾಲಕಿ ಮತ್ತೆ ನಾಪತ್ತೆಯಾಗಿ, ಮತ್ತೊಮ್ಮೆ ಹುಡುಕಿಕೊಂಡು ಬರಲಾಗಿತ್ತು. ಇದೀಗ ಮೂರನೇ ಬಾರಿಗೆ ಹುಡುಗಿ ಅದೇ ಹುಡುಗನೊಂದಿಗೆ ಪರಾರಿಯಾಗಿದ್ದಾಳೆ. ಆರೋಪಿ ಹುಡುಗ ಆಕೆಗೆ ನಿತ್ಯವು ಫೋನ್ ಮಾಡುವ ಮೂಲಕ ತೊಂದರೆ ಕೊಡುತ್ತಿದ್ದ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ.

ಆದರೆ, ಈ ಬಾರಿ ಬಾಲಕಿ ತಂದೆಯ ಫೋನ್​ ಜೊತೆಗೆ ಕೆಲ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಓಡಿ ಹೋಗಿದ್ದಾಳೆ. ಇದೀಗ ಮತ್ತೆ ದೂರು ದಾಖಲಾಗಿದ್ದು, ಮತ್ತೊಮ್ಮೆ ಹುಡುಕಾಟ ಆರಂಭಿಸಿದ್ದಾರೆ. ಹುಡುಗ-ಹುಡುಗಿ ಇಬ್ಬರು ಅಪ್ರಾಪ್ತರಾಗಿದ್ದು, ಪತ್ತೆಯಾದ ಕೂಡಲೇ ಇಬ್ಬರನ್ನು ಸಮಾಲೋಚನೆ ಒಳಪಡಿಸಲು ಪಾಲಕರನ್ನು ಪರಿ ಪರಿಯಾಗಿ ಪೊಲೀಸರು ಬೇಡಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net