

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ತಡೆಗೆ ಪೊಲೀಸರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಜನರಿಗೆ ಕಾಲ್ ಮಾಡುವ ಸಿಮ್ ಕಾರ್ಡ್‌ನ್ನೇ ಬ್ಲಾಕ್ ಮಾಡಿ ಬಳಕೆ ಆಗದಂತೆ ನಿಗಾ ವಹಿಸುತ್ತಿದ್ದಾರೆ. ಕಳೆದ 20 ದಿನಗಳ ಅವಧಿಯಲ್ಲಿ ಸೈಬರ್ ಅಪರಾಧ ಕೃತ್ಯಕ್ಕೆ ಬಳಸಿದ್ದ 15 ಸಾವಿರ ಸಿಮ್‌ಗಳನ್ನು ಕಾರ್ಯಸ್ಥಗಿತ ಮಾಡಿದ್ದಾರೆ.
ಮುಂಬೈ ಪೊಲೀಸ್, ಬೆಸ್ಕಾಂ, ಸೇನಾಧಿಕಾರಿ ಸೋಗಿನಲ್ಲಿ ಅಥವಾ ಲಾಟರಿ ಬಂದಿದೆ, ಸಾಲ ಕೊಡುತ್ತೇವೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಸೇರಿದಂತೆ ನಾನಾ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಸೈಬರ್ ವಂಚಕರು ಮೋಸ ಮಾಡುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಹೆಚ್ಚಾದ ಬಳಿಕ ಸೈಬರ್ ಅಪರಾಧಿಗಳ ಉಪಟಳ ಸಹ ಹೆಚ್ಚಾಗುತ್ತಿದೆ.
ಸೈಬರ್ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಕೃತ್ಯಕ್ಕೆ ಬಳಸುವ ಸಿಮ್ ಕಾರ್ಡ್‌ಗಳನ್ನು ದೂರು ದಾಖಲಾಗದ ತಕ್ಷಣವೇ ಕಾರ್ಯಸ್ಥಗಿತಗೊಳಿಸುತ್ತಿದ್ದಾರೆ. ಇದರಿಂದ ಸೈಬರ್ ವಂಚಕರು, ಹೊಸ ಸಿಮ್ ಖರೀದಿ ಮಾಡಿ ಮತ್ತೆ ಬೇರೆಯವರಿಗೆ ಕಾಲ್ ಮಾಡುವ ಪ್ರಮಾಣ ಇಳಿಮುಖ ಆಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೆ ಒಂದೇ ಸಿಮ್ ಕಾರ್ಡ್ ಬಳಸಿ ಹತ್ತಾರು ಜನರಿಗೆ ಕರೆ ಮಾಡಿ ಆರೋಪಿಗಳು ವಂಚಿಸಿರುವ ಸಂಗತಿ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಸೈಬರ್ ಕಳ್ಳರಿಗೆ ಸಿಮ್ ಕಾರ್ಡ್ ಬಳಕೆಗೆ ಪೊಲೀಸರು ನಿರ್ಬಂಧಿಸಿದ್ದಾರೆ.
ಸೈಬರ್ ಅಪರಾಧ ಕೃತ್ಯ ಸಂಬಂಧ ಠಾಣೆ ಅಥವಾ ಪೊಲೀಸ್ ನಿಯಂತ್ರಣ ಕೊಠಡಿ 112 ಸಂತ್ರಸ್ತರು ಕರೆ ಮಾಡಿ ದೂರು ಸಲ್ಲಿಸಬೇಕು. ಪೊಲೀಸರು, ಮೊಬೈಲ್ ಸಂಖ್ಯೆಯನ್ನು ಬರೆದು ಕೊಂಡು ಸೈಬರ್ ಇನ್ಸಿಡೆಂಟ್ ರಿಪೋರ್ಟ್ (ಸಿಐಆರ್) ಪೋರ್ಟಲ್‌ಗೆ ಆಪ್‌ಲೋಡ್ ಮಾಡುತ್ತಾರೆ. ದೂರ ಸಂಪರ್ಕ ಸೇವಾ ಕಂಪನಿಗಳಿಗೆ ಮಾಹಿತಿ ರವಾನೆಯಾಗಿ ಮೊಬೈಲ್ ನಂಬರ್‌ನ ಸಿಮ್ ಬ್ಲಾಕ್ ಆಗಲಿದೆ ಎಂದು ನಗರದ ಕಮಾಂಡ್ ಸೆಂಟರ್ ಡಿಸಿಪಿ ರವೀಂದ್ರ.ಕೆ.ಗಡಾದಿ ಮಾಹಿತಿ ನೀಡಿದ್ದಾರೆ.
ಆಗಸ್ಟ್ 16ರಿಂದ ಸೈಬರ್ ಕೃತ್ಯಗಳಿಗೆ ಬಳಕೆಯಾದ ಸಿಮ್ ಬ್ಲಾಕ್ ಮಾಡುವುದು ಆರಂಭವಾಗಿದೆ. ಈವರೆಗೆ 15 ಸಾವಿರಕ್ಕೂ ಹೆಚ್ಚಿನ ಸಿಮ್ ಬ್ಲಾಕ್ ಮಾಡಲಾಗಿದೆ. ಇದಕ್ಕಾಗಿ ಕಮಾಂಡ್ ಸೆಂಟರ್‌ನಲ್ಲಿ ನಾಲ್ವರು ಪೊಲೀಸರು ಪಾಳಿಯ ಮೇರೆಗೆ 24 ತಾಸುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ನಿಯಂತ್ರಣ ಕೊಠಡಿಗೆ ಸೈಬರ್ ಕೃತ್ಯಗಳ ಬಗ್ಗೆ ದೂರು ದಾಖಲಾದ ತಕ್ಷಣವೇ ನಂಬರ್ ಬ್ಲಾಕ್ ಆಗಲಿದೆ. ಈ ವಿಭಾಗದ ಸಿಬ್ಬಂದಿಗೆ ದೆಹಲಿ ಮೂಲದ ಸಿಐಆರ್ ಅಧಿಕಾರಿಗಳು ತರಬೇತಿ ಸಹ ನೀಡಿದ್ದಾರೆ.
ಆಗ್ನೇಯ 705
ಈಶಾನ್ಯ 1325
ವೈಟ್‌ಫೀಲ್ಡ್ 1184
ಕೇಂದ್ರ 436
ಪೂರ್ವ 1969
ಪಶ್ಚಿಮ 763
ದಕ್ಷಿಣ 907
ಉತ್ತರ 1038
ಕಮಾಂಡ್ ಸೆಂಟರ್ 7218
................................
ಒಟ್ಟು 15,545
ಸೈಬರ್ ಕ್ರೈಂಗೆ ಬಳಸುವ ಸಿಮ್ ಕಾರ್ಡ್ ಬ್ಲಾಕ್ ಮಾಡುವ ಸೌಲಭ್ಯ ಬೆಂಗಳೂರು ನಗರ ಪೊಲೀಸರಿಗೆ ಲಭ್ಯವಿದೆ. ಸಾರ್ವಜನಿಕರು ಸೈಬರ್ ವಂಚನೆಯಾದ ಕೂಡಲೆ ಪೊಲೀಸ್ ನಿಯಂತ್ರಣ ಕೊಠಡಿ-112 ಅಥವಾ 1930ಗೆ ಕರೆ ಮಾಡಿ ದೂರು ನೀಡಿ.
- ಬಿ.ದಯಾನಂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ