

ಚಿತ್ರದುರ್ಗ: ಕರ್ನಾಟಕದ ನೀರಾವರಿ ಒಳಗೊಂಡಂತೆ ಪ್ರಮುಖ ಯೋಜನೆಗಳ ಕಡತಗಳು, ಕೇಂದ್ರದ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರ ಮುಖಾಂತರವೇ ಬರಬೇಕೆಂಬ ಕೇಂದ್ರದ ನಿರ್ಧಾರಕ್ಕೆ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಹರ್ಷ ವ್ಯಕ್ತಪಡಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ತುಮಕೂರಿಂದ ಲೋಕಸಭೆಗೆ ಆಯ್ಕೆಯಾಗಿರುವ ಸೋಮಣ್ಣ ಅವರಿಂದಾಗಿ ಭದ್ರಾ ಮೇಲ್ದಂಡೆ ಸೇರಿ ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ವೇಗ ಸಿಗಲಿದೆ ಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ 5300 ಕೋಟಿ ರೂ.ಅನುದಾನ ಬಿಡುಗಡೆಗೆ ಸಚಿವರು, ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ ಕೈ ಜೋಡಿಸಲಿದ್ದಾರೆ. ಈ ಸಂಬಂಧ ಸೋಮಣ್ಣ, ತುಮಕೂರಲ್ಲಿ ನ. 14ರಂದು ಸಮಿತಿ ಪ್ರಮುಖರ ಸಭೆ ಕರೆದಿದ್ದಾರೆ. ದೆಹಲಿಗೆ ನಿಯೋಗ ಕರೆದೊಯ್ಯಲೂ ಸಿದ್ಧವಿರುವುದಾಗಿ ತಿಳಿಸಿದ್ದಾರೆ ಎಂದರು.
ಅ. 2ರಂದು ಚಿತ್ರದುರ್ಗಕ್ಕೆ ಆಗಮಿಸಿದ್ದ ಸೋಮಣ್ಣ, ಸಮಿತಿ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಒಂದೂವರೆ ತಿಂಗಳ ಒಳಗೆ ಮೊದಲ ಕಂತು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಇದಕ್ಕೆ ಪೂರಕವೆಂಬಂತೆ ಕೇಂದ್ರ ಸರ್ಕಾರ 17ರಂದು ಸೋಮಣ್ಣಗೆ ರಾಜ್ಯದ ನೀರಾವರಿ ಯೋಜನೆಗಳ ಜವಾಬ್ದಾರಿ ಹೊರಿಸಿ ಆದೇಶಿಸಿದೆ ಎಂದು ಹೇಳಿದರು.
ಸಂಸದ ಗೋವಿಂದ ಕಾರಜೋಳ ಕೇಂದ್ರ ಜಲಶಕ್ತಿ ಸಚಿವಾಲಯದ ಸಂಸದೀಯ ಸಲಹಾ ಸಮಿತಿಗೆ ಸದಸ್ಯರಾಗಿ ನೇಮಕವಾಗಿದ್ದಾರೆ. ಒಂದು ರಾಜ್ಯದ ನೀರಾವರಿ ಯೋಜನೆಗಳ ಜವಾಬ್ದಾರಿಯನ್ನು ಸಚಿವರೊಬ್ಬರಿಗೆ ಕೇಂದ್ರ ವಹಿಸಿರುವುದು ದೇಶದ ಇತಿಹಾಸದಲ್ಲೇ ಇದೇ ಮೊದಲೆಂದು ಅಭಿಪ್ರಾಯಪಟ್ಟರು.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸೋಮಣ್ಣ ಅವರ ತುಮಕೂರು ಕಚೇರಿ ಬಳಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ತಮಟೆ ಚಳವಳಿಯನ್ನು ಸಮಿತಿ ತಾತ್ಕಾಲಿಕವಾಗಿ ಹಿಂಪಡೆದಿದೆ. ಅನುದಾನ ಬಿಡುಗಡೆಗಾಗಿ ಕೇಂದ್ರ ಸಂಪುಟದ ಮುಂದೆ ಪ್ರಸ್ತಾವನೆ ಮಂಡನೆಯಾಗಬೇಕು. ಈಗಾಗಲೇ ರಾಜ್ಯ ಸರ್ಕಾರದಿಂದ ಜಲಶಕ್ತಿ ಸಚಿವಾಲಯದೆದುರು ಸಲ್ಲಿಸಿರುವ ಮರು ಪ್ರಸ್ತಾವನೆಯಂತೆ 1754 ಕೋಟಿ ರೂ. ಖೋತಾ ಮಾಡದೆ, 5300 ಕೋಟಿ ರೂ.ಗಳನ್ನ್ನು ಸಂಪೂರ್ಣವಾಗಿ ಕೇಂದ್ರ ಒದಗಿಸಬೇಕೆಂದರು.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕುಂಠಿತಗೊಂಡಿದ್ದು, 2000 ಕೋಟಿ ರೂ. ಬಿಲ್ ಗುತ್ತಿಗೆದಾರರಿಗೆ ಪಾವತಿ ಆಗಬೇಕಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯದ ಸಣ್ಣ ನೀರಾವರಿ ಇಲಾಖೆಯಿಂದ ಮಾಹಿತಿ ಪಡೆದು ಕ್ರಮ ವಹಿಸುವುದಾಗಿ ಹೇಳಿದರು. ದಯಾನಂದ್, ಸುರೇಶ್‌ಬಾಬು ಬಸ್ತಿಹಳ್ಳಿ, ಜಿ.ಬಿ. ಶೇಖರ್, ಪ್ರೊ.ಜೆ. ಯಾದವರೆಡ್ಡಿ, ಧನಂಜಯ, ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ಷಣ್ಮುಖ ಇದ್ದರು.