ಸೋಂಕಿನ ಭೀತಿಗೆ ಸಾಮೂಹಿಕ ಮರುವಲಸೆ : ಬೆಂಗಳೂರು ತೊರೆದ ಕೂಲಿಕಾರ್ಮಿಕರು ಗ್ರಾಮಗಳಲ್ಲಿ ರೋಗ ಹರಡುವ ಆತಂಕ

27 RMN-MGD P4
Published on

ಮಾಗಡಿ: 14 ದಿನಗಳ ಲಾಕ್‌ಡೌನ್ ಘೋಷಣೆಯಿಂದಾಗಿ ಬೆಂಗಳೂರಿನಲ್ಲಿದ್ದ ಕೂಲಿಕಾರ್ಮಿಕರು ಸಾಮೂಹಿಕವಾಗಿ ಸ್ವಗ್ರಾಮಗಳಿಗೆ ಆಗಮಿಸುತ್ತಿದ್ದ ದೃಶ್ಯ ಮಂಗಳವಾರ ಕಂಡುಬಂದಿತು.

ಉದ್ಯೋಗ ಅರಸಿ ಮಹಾನಗರಕ್ಕೆ ಹೋಗಿದ್ದ ಕೂಲಿಕಾರ್ಮಿಕರು ಇದೀಗ ವಾಪಸ್ ಗ್ರಾಮಗಳಿಗೆ ಮರುವಲಸೆ ಹೋಗುತ್ತಿರುವುದರಿಂದ ಗ್ರಾಮಸ್ಥರಲ್ಲಿ ಕರೊನಾ ಆತಂಕ ಮೂಡಿದೆ. ಬೆಂಗಳೂರಿನ ಬಾಡಿಗೆ ಮನೆಗಳನ್ನು ಖಾಲಿ ಮಾಡಿ ಮನೆಗಳಲ್ಲಿದ್ದ ವಸ್ತುಗಳನ್ನು ಕಾರು, ಬೈಕ್ ಮತ್ತು ಆಟೋದಲ್ಲಿ ಕೊಂಡೊಯ್ಯುತ್ತಿದ್ದರಿಂದ ಮರೂರು ಹ್ಯಾಂಡ್ ಪೊಸ್ಟ್ ಬಳಿ ಕೆಲ ಸಮಯ ಸಂಚಾರದಟ್ಟಣೆ ಉಂಟಾಯಿತು.

ಬೆಂಗಳೂರಿನಲ್ಲಿ ದಿನೆದಿನೇ ಕರೊನಾ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ. ನಮಗೆ ಆರೋಗ್ಯ ಸಮಸ್ಯೆಯಾದರೆ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಹೋಗಲು ಹಣವಿಲ್ಲ. ಮೃತಪಟ್ಟರೆ ನಮ್ಮ ಮೃತದೇಹಗಳು ನಮ್ಮ ಕುಟುಂಬಸ್ಥರಿಗೆ ಸಿಗುವುದಿಲ್ಲ. ಇದರಿಂದ ನಮ್ಮ ಜೀವ ಉಳಿಸಿಕೊಂಡರೇ ಸಾಕಾಗಿದೆ. ಹೀಗಾಗಿ ಊರುಗಳತ್ತ ಹೋಗುತ್ತಿದ್ದೇವೆ ಎಂದು ತುರುವೇಕೆರೆ ತಾಲೂಕಿನ ಭೈರಣ್ಣ ಅಳಲು ತೋಡಿಕೊಂಡರು. ಲಾಕ್‌ಡೌನ್‌ನಿಂದಾಗಿ ಮದ್ಯದಂಗಡಿಗಳಲ್ಲಿ ಮದ್ಯ ಖಾಲಿಯಾಗುತ್ತದೆ ಎಂಬ ಆತಂಕದಿಂದ ಮದ್ಯಪ್ರಿಯರು ಬೆಳಗ್ಗೆ 6 ಗಂಟೆಯಿಂದಲೇ ಮದ್ಯದಂಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು.

ಪಟ್ಟಣದ ಆರ್.ಆರ್. ರಸ್ತೆ ವೈನ್ಸ್ ಸ್ಟೋರ್ ಒಂದರಲ್ಲಿ ಮದ್ಯಪ್ರಿಯರು ಕುಳಿತು ಕುಡಿಯುತ್ತಿದ್ದರು. ಈ ವೇಳೆ ಅಬಕಾರಿ ಅಧಿಕಾರಿಗಳು ಬಾರ್ ಮಾಲೀಕರಿಗೆ ಎಚ್ಚರಿಕೆ ನೀಡುವಂತಹ ಕೆಲಸಕ್ಕೂ ಮುಂದಾಗಿಲ್ಲ. ಹಾಗಾಗಿ ಅಧಿಕಾರಿಗಳ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಕೆಂಪೇಗೌಡ ಸರ್ಕಲ್‌ನ ಬೀದಿ ಬದಿ ಹೋಟೆಲ್ ವ್ಯಾಪಾರಿಗಳು ತಿಂಡಿಯನ್ನು ಪಾರ್ಸಲ್ ನೀಡದೆ ಸ್ಥಳದಲ್ಲೆ ನೀಡುತ್ತಿದ್ದನ್ನು ಕಂಡ ಪುರಸಭೆ ಹೆಲ್ತ್ ಇನ್‌ಸ್ಪೆಕ್ಟರ್ ರವಿಕುಮಾರ್, ಹೋಟೆಲ್ ಮಾಲೀಕನಿಗೆ 100ರೂ ದಂಡ ವಿಧಿಸಿ ಕಾನೂನು ನಿಯಮ ಪಾಲಿಸುವಂತೆ ಎಚ್ಚರಿಕೆ ನೀಡಿದರು. ಇನ್ನು ಟಿಎಪಿಸಿಎಂಎಸ್ ಮುಂದೆ ನೂರಾರು ಮಂದಿ ಪಡಿತರ ಪಡೆಯಲು ಜಮಾಯಿಸಿದ್ದರು. ಈ ವೇಳೆ ಸಾಮಾಜಿಕ ಅಂತರ ಪಾಲಿಸದೆ, ಮಾಸ್ಕ್ ಧರಸದೆ ಕರೊನಾ ನಿಯಮ ಉಲ್ಲಂಘನೆಯಾಗಿದ್ದು ಕಂಡುಬಂತು. ಇನ್ನು ದಿನಸಿ, ತರಕಾರಿ ಖರೀದಿಸಲು ಗ್ರಾಹಕರು ತರಕಾರಿ ಮಾರುಕಟ್ಟೆ ಮತ್ತು ಮಾರ್ಟ್, ದಿನಸಿ ಅಂಗಡಿಗಳ ಬಳಿ ಗುಂಪು ಗುಂಪಾಗಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net